ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗಲಿದೆ: ಆದಿತ್ಯನಾಥ್
ಮಂಗಳೂರು, ಫೆ. 6: ದೇಶದ ತ್ರಿಪುರ, ನಾಗಲ್ಯಾಂಡ್, ಮೆಘಾಲಯ ಸೇರಿದಂತೆ ಈಶಾನ್ಯ ಭಾರತದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಕಮ್ಯೂನಿಸ್ಟ್ ಮುಕ್ತಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕವು ಕಾಂಗ್ರೆಸ್ ಮುಕ್ತಗೊಳ್ಳಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.
ಕುಶಾಲ ನಗರ ಮತ್ತು ಅಂಕೋಲದಿಂದ ಮಾರ್ಚ್ 3ರಂದು ಆರಂಭಗೊಂಡ ಬಿಜೆಪಿ ಜನ ಸುರಕ್ಷಾ ಯಾತ್ರೆ ಮಂಗಳೂರಿಗೆ ಆಗಮಿಸಿದ ಬಳಿಕ ನೆಹರೂ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಆಡಳಿತದಿಂದಾಗಿ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿಗಾಗಿ ಸುರಕ್ಷಾ ಯಾತ್ರೆ ನಡೆದಿದೆ. ದೇಶದಲ್ಲಿ ಮೋದಿ ಅಭಿವೃದ್ಧಿಯ ಮಂತ್ರದೊಂದಿಗೆ ಜನರ ವಿಶ್ವಾಸಗಳಿಸುತ್ತಿದ್ದಾರೆ. ಇದರಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆಯುವಂತಾಗಿದೆ. ದೇಶದ ಅಭಿವೃದ್ಧಿಗೆ ಜನರ ಅಭಿವೃದ್ಧಿ, ರಕ್ಷಣೆ ಮುಖ್ಯ. ಕರ್ನಾಟಕದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳಿಂದಾಗಿ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಪರಿಣಾಮವಾಗಿ ಮಹಿಳೆಯರು, ಕಾರ್ಮಿಕರು ರಕ್ಷಣೆ ಇಲ್ಲದೆ ಭೀತಿಯಿಂದ ಬದುಕುವಂತಾಗಿದೆ. ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಲು ಅವರಿಗೆ ನೆರವು ನೀಡಿದ್ದೇವೆ. ಕರ್ನಾಟಕದಲ್ಲಿ ಆ ರೀತಿಯ ಕ್ರಮ ಕೈ ಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಗೂಂಡಾ ಚಟುವಟಿಕೆಗಳನ್ನು ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದ ಪ್ರಕಾರ ಕ್ರಮ ಕೈಗೊಂಡಿದ್ದೇವೆ ಎಂದರು.
ಜನರಿಗೆ ಉದ್ಯೋಗ, ಅಭಿವೃದ್ಧಿಗಾಗಿ ಕ್ರಮ ಕೈಗೊಂಡಿದ್ದೇವೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಹಿಂದೂ ವಿರೊಧಿ ನೀತಿಯನ್ನು ಅನುಸರಿಸುತ್ತಿದೆ. ಜೊತೆಗೆ ಜನರಿಗೆ ರಕ್ಷಣೆ ನೀಡುವಲ್ಲಿಯೂ ವಿಫಲವಾಗಿದೆ ಎಂದು ಆದಿತ್ಯನಾಥ್ ಟೀಕಿಸಿದರು.
ಕರ್ನಾಟಕ ಕಾಂಗ್ರೆಸಿನ ಎಟಿಎಂ ಇದ್ದಂತೆ
ಕಾಂಗ್ರೆಸ್‌ಗೆ ಕರ್ನಾಟಕ ರಾಜ್ಯ ಹಣ ದೋಚಲು ಎಟಿಎಂ ಇದ್ದಂತೆ ಇದೆ. ಜನರ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಭ್ರಷ್ಟಾಚಾರ ಹೆಚ್ಚಿದೆ. ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ, ಅಪರಾಧ ಮುಕ್ತ ರಾಜ್ಯವನ್ನಾಗಿ ಮಾಡಲು ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕೆಂದು ಆದಿತ್ಯನಾಥ್ ಜನತೆಯಲ್ಲಿ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡುತ್ತಾ, ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ತಡೆಯಲು ರಾಷ್ಟ್ರೀಯ ತನಿಖಾ ದಳದ ಶಾಖೆಯನ್ನು ಆರಂಭಿಸಬೇಕು ಎಂದು ಕೇಂದ್ರವನ್ನು ಆಗ್ರಹಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿ ಕಾರ್ಯಕರ್ತರ ಮೇಲೆ ರಾಜಕೀಯ ಪ್ರೇರಿತವಾಗಿ ಹಾಕಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದರು. ಹತ್ಯೆಗೀಡಾದ 24 ಹಿಂದೂಗಳ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಹಾಗೂ ಆತ್ಮಹತ್ಯೆ ಮಾಡಿಕೊಂಡ 3,750 ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಮತ್ತು ಹತ್ಯೆಗೆ ಕಾರಣವಾಗಿರುವ ಸಂಘಟನೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಮಾತನಾಡುತ್ತಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬೆಂಗಳೂರು ಚಲೋ ಮಾಡುತ್ತೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಅಭಿಯಾನದ ಗುರಿ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿರುವ ಅವಧಿಯಲ್ಲಿ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳನ್ನು ಗಮನಿಸಬೇಕು .11 ಲಕ್ಷಕ್ಕೂ ಅಧಿಕ ಅಪರಾಧ ಪ್ರಕರಣಗಳು ನಡೆದಿವೆ. ಇಂತಹ ಆಡಳಿತ ನಡೆಸಿರುವ ಓರ್ವ ಪಾತಕಿ ಮುಖ್ಯ ಮಂತ್ರಿ, ಕೊಲೆಗಡುಕ ಸರಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಆಭಿಯಾನ ಮುಂದುವರಿಯಲಿದೆ ಎಂದು ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸುರಕ್ಷ ಯಾತ್ರೆಯನ್ನು ಟೀಕಿಸಿ ಇಲ್ಲಿನ ಮಂಗಳೂರು ಶಾಸಕರು ದಸರಾ ಆಚರಿಸುವ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಸರಕಾರ ಹಂತಕ ಭಾಗ್ಯ ನೀಡಿದ ಸರಕಾರ ಎಂದು ಟೀಕಿಸಿದರು.
ಬಿಜೆಪಿ ಉಪಾಧ್ಯಕ್ಷ ಶ್ರೀರಾಮಲು ಮಾತನಾಡುತ್ತಾ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿ, ಸಂಘ ಪರಿವಾರದವರ ಮೇಲಿನ ಎಲ್ಲಾ ಪ್ರಕರಣಗಳನ್ನು 24 ಗಂಟೆಗಳ ಒಳಗೆ ಹಿಂದಕ್ಕೆ ಪಡೆಯಲು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಯಡಿಯೂರಪ್ಪ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಸಿ.ಟಿ.ರವಿ, ಸುನಿಲ್ ಕುಮಾರ್, ಪ್ರತಾಪ್ ಸಿಂಹ, ಗಣೇಶ್ ಕಾರ್ನಿಕ್, ಅಂಗಾರ, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ರತ್ನಾಕರ ಹೆಗ್ಡೆ ಮಟ್ಟಾರ್ ಮೊದಲಾದವರು ಉಪಸ್ಥಿತರಿದದರು.