ಮಾ.7: ಎಂಆರ್‌ಪಿಎಲ್‌ಗೆ ಬೀಗ ಜಡಿಯಲು ಒತ್ತಾಯಿಸಿ ಜೋಕಟ್ಟೆ ಗ್ರಾಮಸ್ಥರ ಮೆರವಣಿಗೆ
ಮಂಗಳೂರು, ಮಾ. 6: ಜಿಲ್ಲಾಡಳಿತದ ಸೂಚನೆ, ಆದೇಶವನ್ನು ಧಿಕ್ಕರಿಸುವ ಎಂಆರ್‌ಪಿಎಲ್ ಕಂಪೆನಿಗೆ ಬೀಗ ಜಡಿಯಬೇಕು ಎಂದು ಒತ್ತಾಯಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವತಿಯಿಂದ ಮಾ.7ರಂದು ಬೆಳಗ್ಗೆ 10:30ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಂಆರ್‌ಪಿಎಲ್ ಸರ್ವಾಧಿಕಾರಿ ಧೋರಣೆಗಳಿಂದ ಆಸುಪಾಸಿನ ಸುತ್ತಲ ಗ್ರಾಮಗಳ ಪರಿಸರ ಹಾನಿಗೊಳಗಾಗಿದೆ. ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ನಿಯಮ ಬಾಹಿರ ನಿರ್ಮಾಣದಿಂದ ಜೋಕಟ್ಟೆ, ಕಳವಾರು ಭಾಗದಲ್ಲಿ ಗ್ರಾಮಸ್ಥರ ಬದುಕು ನರಕಸದೃಶವಾಗಿದೆ. ಕೋಕ್ ಹಾರುಬೂದಿ, ಗಾಳಿ, ನೀರು ಮಾಲಿನ್ಯದಿಂದ ತತ್ತರಿಸಿದ ಗ್ರಾಮಸ್ಥರ ನಿರಂತರ ಹೋರಾಟದಿಂದ ಸರಕಾರ ಹಸಿರು ವಲಯ ನಿರ್ಮಾಣ, ಶಬ್ದ, ವಾಯು ಮಾಲಿನ್ಯಕ್ಕೆ ತಡೆ, ಹಾರುಬೂದಿಯಿಂದ ಸಂರಕ್ಷಣೆ ಮುಂತಾದ ಆರು ಅಂಶಗಳ ಪರಿಹಾರ ಕ್ರಮಗಳನ್ನು ಕಾಲಮಿತಿಯೊಳಗಡೆ ಕೈಗೊಳ್ಳುವಂತೆ ಎಂಆರ್‌ಪಿಎಲ್ ಕಂಪೆನಿಗೆ ನಿರ್ದೇಶಿಸಿ 2 ವರ್ಷದ ಹಿಂದೆಯೇ ಗಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ ಎಂಆರ್‌ಪಿಎಲ್ ಯಾವ ಕ್ರಮವನ್ನೂ ಕೈಗೊಳ್ಳದೆ ಸರಕಾರದ ಆದೇಶಕ್ಕೆ ಅವಿಧೇಯತೆ ತೋರಿದೆ. ಇದರಿಂದ ಗ್ರಾಮಸ್ಥರ ಸಮಸ್ಯೆ ಬಿಗಡಾಯಿಸಿದ್ದು, ಜನತೆ ತಮ್ಮ ಮನೆಗಳನ್ನು ತೊರೆದು ವಲಸೆಹೋಗುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನೊಂದೆಡೆ ಕಂಪೆನಿ ಮತ್ತೆ ಒಂದು ಸಾವಿರ ಕೃಷಿಭೂಮಿ ವಶಪಡಿಸಿ ನಾಲ್ಕನೆ ಹಂತದ ಘಟಕ ಸ್ಥಾಪಿಸಲು ಮುಂದಾಗಿದೆ.
ಸರಕಾರದ ಆದೇಶವನ್ನು ಧಿಕ್ಕರಿಸುತ್ತಿರುವ ನಿಯಮ ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಕಂಪೆನಿಯ ಪೆಟ್‌ಕೋಕ್, ಸಲ್ಫರ್ ಘಟಕಕ್ಕೆ ಬೀಗ ಜಡಿಯಬೇಕು, ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಜೋಕಟ್ಟೆ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಬೇಕು, ಎಂಆರ್‌ಪಿಎಲ್ ನಾಲ್ಕನೇ ಹಂತದ ವಿಸ್ತರಣೆಗೆ ಯಾವುದೇ ಕಾರಣಕ್ಕೂ ಭೂಮಿ ನೀಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.