ಪಿಎಫ್‌ಐ ನಿಷೇಧಿಸಲು ಮುಂದಾಗದ ಕಾಂಗ್ರೆಸ್: ಜಗದೀಶ್ ಶೆಟ್ಟರ್
ಕಾಪು, ಮಾ. 6: ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಗೂಂಡಾಗಿರಿ, ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಚಲಿತವಾಗಿದೆ. ಚುನಾವಣೆ ಘೋಷಣೆಯಾಗಿಲ್ಲ, ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮತದಾರರನ್ನು ಸೆಳೆಯಲು ನಾನಾ ರೀತಿಯ ಅಮಿಷ ಒಡ್ಡುವ ಕೆಲಸ ಕಾಂಗ್ರೆಸ್ ಅಭ್ಯರ್ಥಿಗಳು ಆರಂಭಿಸಿದ್ದಾರೆ. ಇದರಿಂದ ಅವರೆಷ್ಟು ಹಣ ಮಾಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.
ಅವರು ಬಿಜೆಪಿಯ ಜನ ರಕ್ಷಾ ಸುರಕ್ಷಾ ಯಾತ್ರೆ ಅಂಗವಾಗಿ ಪಾಂಗಾಳ ಜನಾರ್ದನ ದೇವಸ್ಥಾನದಿಂದ ಕಾಪುವಿನವರೆಗೆ ಮಂಗಳವಾರ ನಡೆದ ಪಾದಯಾತ್ರೆ ಬಳಿಕ ಕಾಪು ಪೇಟೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.
ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕಕ್ಕೆ ರಾಹುಲ್ ಗಾಂಧಿ ಬಂದಷ್ಟು ಸಲ ಒಳ್ಳೆಯದೇ. ಕಾಂಗ್ರೆಸ್‌ಗೆ ಹಿಂದೂಗಳ ಓಟು ಬೇಕಾಗಿದೆ ಎಂದು ಈಗ ನೆನಪಾಗಿದ್ದು, ಅದಕ್ಕಾಗಿ ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಮಠಮಂದಿರಗಳ ಭೇಟಿ ಆರಂಭಿಸಿದ್ದಾರೆ ಎಂದರು.
ಮೋಸ ಮಾಡುವ ಸರಕಾರ ರಾಜ್ಯದಲ್ಲಿದೆ. ಹಿಂದೂಗಳಿಗೆ ನ್ಯಾಯ ಸಿಗಬೇಕು. ಇನ್ನೊಂದು ಬಾರಿ ಸಿದ್ದರಾಮಯ್ಯ ಅಧಿಕಾರ ಪಡೆದರೆ ರಾಜ್ಯದಲ್ಲಿ ಹಿಂದೂ ಗಳು ಉಳಿಯಕ್ಕಾಗಲ್ಲ. ಅರಬ್ಬೀ ಸಮುದ್ರಕ್ಕೆ ಬೀಳಬೇಕಾದ ಪರಿಸ್ಥಿತಿ ಬರಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಸರ್ಕಾರ ಶಾಶ್ವತ ಅಲ್ಲ. ಪೊಲೀಸರೇ ನೀವು ಚೇಲಾಗಳಂತೆ ಕರ್ತವ್ಯ ಮಾಡದಿರಿ. ಅನ್ಯಾಯ ಮೋಸ ಮಾಡುವ ಸರಕಾರ ಇಲ್ಲಿದೆ. ಪೊಲೀಸರಿಗೆ ಸ್ವಾತಂತ್ರ್ಯ ಸಿಗಬೇಕು, ಚೇಲಾಗಳಂತೆ ವರ್ತಿಸುವರಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳ ಶಾಸಕ ವಿ. ಸುನಿಲ್‌ಕುಮಾರ್ ಮಾತನಾಡಿ, ಕರಾವಳಿಗೆ ಮಸಿ ಬಳಿಯುವ ಕೆಲಸ ರಾಜ್ಯ ಸರಕಾರದಿಂದಾಗುತ್ತಿದೆ. ಹಿಂದೂ ಸಮಾಜ ನೆಮ್ಮದಿ ಯಿಂದ ಬದುಕಲು ಕಾಂಗ್ರೆಸ್ ಸರಕಾರದಿಂದ ಸಾಧ್ಯವಿಲ್ಲ. ಗೋಮಾಂಸ ತಿನ್ನುತ್ತೇನೆ ಎನ್ನುವ ಮುಖ್ಯಮಂತ್ರಿಯಿಂದ ಯಾವರೀತಿಯ ನ್ಯಾಯ ನಿರೀಕ್ಷಿಸಬಹುದು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಟಿಪ್ಪು ಜಯಂತಿ ಸಡಗರ ಸಂಭ್ರಮದಿಂದ ನಡೆಯಲಿಲ್ಲ. 144 ಸೆಕ್ಷನ್ ಮೂಲಕ ಆಚರಣೆ ಮಾಡುವ ಸರಕಾರಕ್ಕೆ ನೈತಿಕತೆ ಇದೆಯೇ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕೆ. ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಉದಯಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಕೆ ಸುರೇಶ್ ನಾಯಕ್, ಶ್ಯಾಮಲಾ ಕುಂದರ್, ಯಶಪಾಲ್ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ನಯನ ಗಣೇಶ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಶೆಟ್ಟಿ, ಮುರಲೀಧರ ಪೈ, ಶ್ರೀಶ ನಾಯಕ್, ಸಂದೀಪ್ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು ಇದ್ದರು.