×
Ad

ಭಟ್ಕಳ : ಶಾಂತಿ, ಸೌಹಾರ್ದಕ್ಕೆ ಒತ್ತು ನೀಡಲು ಎಲ್ಲಮ್ಮ ಮರಿಸ್ವಾಮಿ ಕರೆ

Update: 2018-03-07 22:57 IST

ಭಟ್ಕಳ,ಮಾ.7: ದೇಶದಲ್ಲಿ ಹಿಂದೂ-ಮುಸ್ಲಿಮರು ಶಾಂತಿ ಸೌಹಾರ್ದಕ್ಕೆ ಸಹಕರಿಸಬೇಕೆಂದು ಭಟ್ಕಳ ಕ್ಷೇತ್ರ ಸಂಪನ್ಮೂಲ ಸಂಯೋಜಕಿ ಎಲ್ಲಮ್ಮ ಮರಿಸ್ವಾಮಿ ಕರೆ ನೀಡಿದರು. 

ಅವರು ಇಲ್ಲಿನ ರಾಯಕ್ ಓಕ್ ಹೋಟೆಲ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಹಾಗೂ ಅಲ್-ಕೌಸರ್ ಗರ್ಲ್ಸ್ ಕಾಲೇಜ್ ಜಂಟಿಯಾಗಿ ಆಯೋಜಿಸಿದ್ದ ಕೋಮುಸೌಹಾರ್ದತೆ ಹಾಗೂ ಹಿಂದೂ-ಮುಸ್ಲಿಂ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಮಹಿಳೆ ಶಿಕ್ಷಿತಳಾದರೆ ಇಡೀ ಸಮುದಾಯ ಶಿಕ್ಷಣ ಪಡೆದಂತಾಗುತ್ತದೆ. ಶಿಕ್ಷಣದಿಂದಾಗಿ ಸಮಾಜದ ಆಗುಹೋಗುಗಳ ಅರಿವಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ಸೌಹಾರ್ದ ಮೂಡಬೇಕಾದರೆ ನಮ್ಮಲ್ಲಿ ಶಿಕ್ಷಣವೆನ್ನುವುದು ಅತಿ ಅವಶ್ಯಕವಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿಯ ಕುಲ್ಸುಮ್ ಅಬೂಬಕರ್, ಇಸ್ಲಾಮ್ ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಪರಸ್ಪರ ಶಾಂತಿ ಸೌಹಾರ್ದದಿಂದ ಬದುಕುವುದಕ್ಕೆ ಕುರ್ ಆನ್ ಹೆಚ್ಚಿನ ಆಧ್ಯತೆ ನೀಡಿದೆ. ಮಾನವ ಹಕ್ಕುಗಳನ್ನು ಪಾಲಿಸುವಂತಾಗಬೇಕು, ಸಕಲ ಧರ್ಮದ ಅನುಯಾಯಿಗಳು ಪರಸ್ಪರರನ್ನು ಅರಿತುಕೊಳ್ಳುವಂತೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಅಂಜುಮನ್ ಬಾಲಕಿಯರ ಪ್ರೌಢಶಾಲೆಯಲ್ಲಿ 37 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶಶಿಕಲಾ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರಕಾರಿ ಉರ್ದು ಪ್ರೌಢಶಾಲೆ ಜಾಮಿಯಾ ಜಾಲಿಯ ಮುಖ್ಯಾಧ್ಯಾಪಕಿ  ಶ್ರೀಮತಿ ನಯನ, ಜ.ಇ.ಹಿಂದ್ ಭಟ್ಕಳ ಮಹಿಳಾ ಸಂಚಾಲಕಿ ಫೌಝಿಯಾ ಶಕೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಲ್ ಕೌಸರ್ ಗರ್ಲ್ಸ್ ಕಾಲೇಜು ವಿದ್ಯಾರ್ಥಿನಿ ತಬಸ್ಸುಮ್ ರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.  ಸಭಿಹಾ ಫಾರೂಖ್ ಕೌಡಾ ಕನ್ನಡದಲ್ಲಿ ಅನುವಾದಿಸಿದರು. ಫೌಝಿಯಾ ತನ್ವೀರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಮಹಿಳಾ ಸಂಚಾಲಕಿ ನಬೀರಾ ಮೊಹತೆಶಮ್ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News