ವಾರ್ಡ್ ಭೇಟಿ ನೀಡಿ ಸಮಸ್ಯೆ ಅರಿಯುವ ಪ್ರಯತ್ನ: ಭಾಸ್ಕರ ಮೊಯ್ಲಿ

Update: 2018-03-08 13:59 GMT

ಮಂಗಳೂರು, ಮಾ.8: ಒಂದು ವರ್ಷದ ಅಧಿಕಾರಾವಧಿಯಲ್ಲಿ ಪಾಲಿಕೆಯ ಸರ್ವ ಸದಸ್ಯರು ಹಾಗು ಅಧಿಕಾರಿಗಳ ಸಹಕಾರದೊಂದಿಗೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದ ನೂತನ ಮೇಯರ್ ಭಾಸ್ಕರ ಮೊಯ್ಲಿ, ತಮ್ಮ ಅವಧಿಯಲ್ಲಿ 60 ವಾರ್ಡ್ ಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ಪಕ್ಷದಿಂದ ತನ್ನನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ  ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಜನಾದರ್ನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯರು ಸಹಕರಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಅವರು ಹೇಳಿದರು.

ಧಾರ್ಮಿಕ ನೇತಾರ ನೂತನ ಮೇಯರ್
ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಭಾಸ್ಕರ ಮೊಯ್ಲಿ ಅವರು ಧಾರ್ಮಿಕ ಹಾಗು ಸಾಮಾಜಿವಾಗಿ ಗುರುತಿಸಿಕೊಂಡವರು. 1964ರಲ್ಲಿ ಜನಿಸಿರುವ ಇವರು, ಮನಪಾ ಸದಸ್ಯರಾಗಿ 3ನೆ ಅವಧಿಗೆ ಆಯ್ಕೆಯಾದವರು. ಎಸೆಸ್ಸೆಲ್ಸಿ ಹಾಗು ಐಟಿಐ ವಿದ್ಯಾರ್ಹತೆ ಹೊಂದಿರುವ ಇವರು ವೃತ್ತಿಯಲ್ಲಿ ಉದ್ಯಮಿ. ಈ ಹಿಂದೆ ನರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಇವರು ಹೊಂದಿದ್ದಾರೆ. ಎನ್ಎಂಪಿಟಿ ಟ್ರಸ್ಟ್, ರಾಜ್ಯ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರಾಗಿರುವ ಭಾಸ್ಕರ ಮೊಯ್ಲಿ, 20 ವರ್ಷಳಿಂದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸರಕಾರದಿಂದ ನಿಯೋಜಿತ ಏಕೈಕ ಸದಸ್ಯರಾಗಿದ್ದಾರೆ. ಇವರ ಪತ್ನಿ ರಾಜೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಇಬ್ಬರು ಪುತ್ರರಿದ್ದಾರೆ.

ಪಕ್ಷದಲ್ಲಿ ರಾಜ್ಯ ಹಾಗು ಜಿಲ್ಲಾ ಯುವ ಕಾಂಗ್ರೆಸ್ ನಲ್ಲಿ ಹಿಂದೆ ನಾಯರಾಗಿದ್ದ ಭಾಸ್ಕರ ಮೊಯ್ಲಿ, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿದ್ದಾರೆ.

ಮೇಯರ್ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುವೆ: ಮುಹಮ್ಮದ್
ಮುಂದಿನ ಒಂದು ವರ್ಷದ ಆಳಿತಾವಧಿಯಲ್ಲಿ ಮೇಯರ್‌ರವರ ಅಭಿವೃದ್ಧಿ ಯೋಜನೆಗಳಲ್ಲಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದ್ದೇನೆ ಎಂದು ಉಪ ಮೇಯರ್ ಮುಹಮ್ಮದ್ ಕೆ ಹೇಳಿದ್ದಾರೆ.

52ರ ಹರೆಯದ ಮುಹಮ್ಮದ್ ಕೆ. ಅವಿವಾಹಿತರಾಗಿದ್ದು, ಬಿಎ ಪದವೀಧರರು. ಮನಪಾಕ್ಕೆ 2ನೆ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ನರ ಯೋಜನೆ ಸ್ಥಾಯಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇಸ್ಲಾಮಿಯಾ ಎಜುಕೇಶನಲ್ ಟ್ರಸ್ಟ್ ನಡಿ ಕಾರ್ಯ ನಿರ್ವಹಿಸುತ್ತಿರುವ ಕುಂಜತ್ತಬೈಲ್‌ನ ನೊಬೆಲ್ ಆಂಗ್ಲ ಮಾದ್ಯಮ ಶಾಲೆಯ ಕರೆಸ್ಪಾಂಡೆಂಟ್ ಆಗಿರುವ ಇವರು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಳ್ಳಾಲ ಐಟಿಐಯಲ್ಲಿ ತರಬೇತು ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ಷದಲ್ಲಿ ಪ್ರಸ್ತುತ ಸುರತ್ಕಲ್ ಬ್ಲಾಕ್ ನ ವಕ್ತಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News