ಹಾಲಿ ಹಣಕಾಸು ವರ್ಷದಲ್ಲಿ 85,315 ಕೋ.ರೂ.ಗಳ ಹೆಚ್ಚುವರಿ ವೆಚ್ಚಕ್ಕೆ ಸಂಸತ್ತಿನ ಅನುಮತಿ ಕೋರಿದ ಕೇಂದ್ರ
ಹೊಸದಿಲ್ಲಿ,ಮಾ.8: ಹಾಲಿ ಹಣಕಾಸು ವರ್ಷದಲ್ಲಿ 85,315 ಕೋ.ರೂ.ಗಳ ಹೆಚ್ಚುವರಿ ವೆಚ್ಚವನ್ನು ಮಾಡಲು ಕೇಂದ್ರವು ಗುರುವಾರ ಸಂಸತ್ತಿನ ಅನುಮತಿಯನ್ನು ಕೋರಿದ್ದು, ಈ ಪೈಕಿ ಶೇ.70ರಷ್ಟು ಮೊತ್ತವನ್ನು ಜಿಎಸ್‌ಟಿ ಜಾರಿಯಿಂದ ರಾಜ್ಯಗಳ ಆದಾಯ ನಷ್ಟಕ್ಕೆ ಪರಿಹಾರವನ್ನಾಗಿ ನೀಡಲು ನಿಗದಿ ಮಾಡಲಾಗಿದೆ.
ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು 2017-18ನೇ ಸಾಲಿಗೆ ಅನುದಾನಗಳಿಗೆ ಪೂರಕ ಬೇಡಿಕೆಗಳ ನಾಲ್ಕನೇ ಕಂತನ್ನು ಲೋಕಸಭೆಯಲ್ಲಿ ಮಂಡಿಸಿದರು.
85,315 ಕೋ.ರೂ.ಗಳ ಶೇ.70ರಷ್ಟು ಮೊತ್ತವನ್ನು ಕಂದಾಯ ಇಲಾಖೆಗಾಗಿ ಮೀಸಲಿರಿಸಲಾಗಿದೆ. ಇದು ರಾಜ್ಯಗಳಿಗೆ ನೀಡಬೇಕಾದ ಆದಾಯ ನಷ್ಟ 58,999 ರೂ. ಮತ್ತು ಸಿಎಸ್‌ಟಿ ಪರಿಹಾರವಾಗಿ ನೀಡಬೇಕಾದ 1,384 ಕೋ.ರೂ.ಗಳನ್ನೊಳಗೊಂಡಿದೆ. ವಿವಿಧ ಯೋಜನೆಗಳಡಿ ಅನುದಾನ ಮತ್ತು ಬಂಡವಾಳ ಆಸ್ತಿಗಳ ಸೃಷ್ಟಿಗಾಗಿ 15,065.65 ಕೋ.ರೂ.ಇನ್ನೊಂದು ಪ್ರಮುಖ ವೆಚ್ಚ ಶೀರ್ಷಿಕೆಯಾಗಿದೆ ಎಂದು ಮೇಘ್ವಾಲ್ ತಿಳಿಸಿದರು.
ರಕ್ಷಣಾ ಪಿಂಚಣಿಗಳನ್ನು ಪಾವತಿಸಲು 9,260 ಕೋ.ರೂ. ಮತ್ತು ಮಾರುಕಟ್ಟೆ ಸಾಲ ಹಾಗೂ ಟ್ರೆಝರಿ ಬಿಲ್‌ಗಳ ಮೇಲಿನ ಬಡ್ಡಿ ಪಾವತಿಗೆ 5,721.90 ಕೋ.ರೂ.ಗಳನ್ನು ವ್ಯಯಿಸಲಾಗುವುದು ಎಂದೂ ಅವರು ತಿಳಿಸಿದರು.