×
Ad

ಉ.ಪ್ರದೇಶ ಜೈಲುಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಚ್‌ಐವಿ

Update: 2018-03-08 20:07 IST

ಲಕ್ನೊ, ಮಾ.8: ಉ.ಪ್ರದೇಶದ ಜೈಲುಗಳಲ್ಲಿ ಎಚ್‌ಐವಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂಬ ಮಾಧ್ಯಮದ ವರದಿಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಕ್ರಮ ಕೈಗೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ), ಈ ಕುರಿತ ವಿವರವಾದ ವರದಿಯನ್ನು ಆರು ತಿಂಗಳೊಳಗೆ ಸಲ್ಲಿಸುವಂತೆ ಸೂಚಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಬಂಧೀಖಾನೆ ಮಹಾನಿರೀಕ್ಷಕರಿಗೆ ನೋಟಿಸ್ ಜಾರಿಗೊಳಿಸಿದೆ.

ಕಳೆದ ನಾಲ್ಕು ತಿಂಗಳಲ್ಲಿ ಗೋರಖ್‌ಪುರ ಜೈಲಿನಲ್ಲಿ ಬಂಧಿಗಳಾಗಿರುವ 24 ಮಂದಿಯಲ್ಲಿ ಎಚ್‌ಐವಿ ಲಕ್ಷಣ ಇರುವುದು ಪರೀಕ್ಷೆಯಿಂದ ತಿಳಿದುಬಂದಿದೆ. ಅಲ್ಲದೆ ರಾಜ್ಯದ 70 ಜೈಲುಗಳಲ್ಲಿ ರಾಜ್ಯದ ಏಡ್ಸ್ ನಿಯಂತ್ರಣಾ ಸೊಸೈಟಿ ನಡೆಸಿರುವ ಪರೀಕ್ಷೆಯಲ್ಲಿ 265 ಖೈದಿಗಳಲ್ಲಿ ಎಚ್‌ಐವಿ ಲಕ್ಷಣ ಕಂಡುಬಂದಿದೆ. ಎಚ್‌ಐವಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಸಹಿತ ಆರು ತಿಂಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸರಕಾರಕ್ಕೆ ನೋಟಿಸ್ ನೀಡಲಾಗಿದೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಎನ್‌ಎಚ್‌ಆರ್‌ಸಿ ಉಪನಿರ್ದೇಶಕರು ತಿಳಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಬಂಧಿತರಾಗಿರುವ ಖೈದಿಗಳ ರಕ್ತ ಪರೀಕ್ಷೆ ನಡೆಸಿದಾಗ ಈ ವಿಷಯ ತಿಳಿದುಬಂದಿದೆ. ಬರೇಲಿ, ಅಲಹಾಬಾದ್, ಗೋರಖ್‌ಪುರ, ಲಕ್ನೊ, ಫೈಝಾಬಾದ್, ಆಗ್ರ, ಮೀರತ್, ವಾರಾಣಾಸಿ ಮತ್ತು ಕಾನ್ಪುರದಲ್ಲಿ ಹೆಚ್ಚಿನ ಪ್ರಕರಣ ವರದಿಯಾಗಿದೆ. ಇತರ ಖೈದಿಗಳಿಗೆ ಎಚ್‌ಐವಿ ಸೋಂಕು ಹರಡದಂತೆ ಹಾಗೂ ಎಚ್‌ಐವಿ ಸೋಂಕಿನ ಲಕ್ಷಣ ಕಂಡುಬಂದಿರುವ ಖೈದಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

  ಆದರೆ ಖೈದಿಗಳಿಗೆ ಜೈಲಿನೊಳಗೆ ಎಚ್‌ಐವಿ ಸೋಂಕು ಬಾಧಿಸಿಲ್ಲ. ಅವರು ಜೈಲುವಾಸಕ್ಕೆ ಬಂದಾಗಲೇ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಮಾದಕ ವಸ್ತು ಸೇವನೆಯಂತಹ ಕೃತ್ಯ ನಡೆಸಿ ಬಂಧಿಸಲ್ಪಟ್ಟ ಖೈದಿಗಳಲ್ಲಿ ಎಚ್‌ಐವಿ ಸೋಂಕಿನ ಲಕ್ಷಣವಿತ್ತು ಎಂದು ಗೋರಖ್‌ಪುರ ಬಂದೀಖಾನೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News