ಭಟ್ಕಳ: ಜಾನುವಾರು ಸಾಗಾಟದ ಆರೋಪ; ಇಬ್ಬರಿಗೆ ಮಾರಣಾಂತಿಕ ಹಲ್ಲೆ
ಭಟ್ಕಳ, ಮಾ. 8: ಅಂಕೋಲದಿಂದ ವಾಹನವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಹೆದ್ದಾರಿಯಲ್ಲಿ ವಾಹನ ತಡೆದ ನೂರಕ್ಕೂ ಅಧಿಕ ಸಂಘಪರಿವಾರಕ್ಕೆ ಸೇರಿದ ಕಾರ್ಯಕರ್ತರೆನ್ನಲಾದವರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಬುಧವಾರ ತಡರಾತ್ರಿ ವರದಿಯಾಗಿದೆ.
ಹಲ್ಲೆಗೊಳಗಾದವರನ್ನು ಭಟ್ಕಳದ ಮಗ್ದೂಮ್ ಕಾಲನಿಯ ನೂರುಲ್ ಅಮೀನ್ (40) ಹಾಗೂ ಮುಗಳೀಹೊಂಡದ ಗುಫ್ರಾನ್ ಪೋತೆ (35) ಎಂದು ಗುರುತಿಸಲಾಗಿದೆ.
ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಅಲ್ಲದೆ ನೂರಕ್ಕೂ ಹೆಚ್ಚು ಮಂದಿಯ ವಿರುದ್ಧ ಕಾನೂನು ಕೈಗೆತ್ತಿಗೊಂಡಿರುವ ಪ್ರಕರಣವನ್ನು ದಾಖಲಿಸಲಾಗಿದೆ. ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಕಟ್ಟೆಚ್ಚರದ ಕ್ರಮ ಕೈಗೊಂಡಿದ್ದಾರೆ.
ಘಟನೆಯ ವಿವರ: ಬುಧವಾರ ರಾತ್ರಿ ಅಂಕೋಲದಿಂದ ಎರಡು ಎಮ್ಮೆ ಹಾಗೂ ಒಂದು ಎತ್ತನ್ನು ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ ವಿಷಯವನ್ನು ಅರಿತ ಹೊನ್ನಾವರದ ನೂರಾರು ಮಂದಿ ಸಂಘಪರಿವಾರದ ಕಾರ್ಯಕರ್ತರು ರಾ.ಹೆ. ಯಲ್ಲಿ ತಡರಾತ್ರಿ ವಾಹನವನ್ನು ತಡೆದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ವಾಹನವನ್ನು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಜಖಂಗೊಳಿಸಿದ್ದಾರೆ. ಘಟನೆಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹಲ್ಲೆಕೋರರಿಂದ ಇಬ್ಬರ ಪ್ರಾಣವನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಭಟ್ಕಳಕ್ಕೆ ಸಾಗಿಸಿದರೆ ಅಲ್ಲಿ ಪರಿಸ್ಥಿತಿ ಹದಗೆಡಬಹುದು ಎನ್ನುವ ಉದ್ದೇಶದಿಂದ ಕಾರವಾರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು, ನೂರಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ಗಾಯಾಳುಗಳ ಸಂಬಂಧಿಕರು ಕಾರವಾರ ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರ ಸ್ಥಿತಿಯನ್ನು ಕಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದು, ಆ್ಯಂಬುಲೆನ್ಸ್ ನಲ್ಲಿ ಅವರನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಭಟ್ಕಳದ ಸರ್ಕಲ್ ಬಳಿ ನೂರಾರು ಮಂದಿ ಸೇರಿದ್ದು, ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಭೇಟಿಯಾಗಲು ಯಾರಿಗೂ ಅವಕಾಶ ಮಾಡಿಕೊಡದೆ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.
ಆರೋಪಿಗಳು ಕಾನೂನು ಕೈಗೆತ್ತಿಕೊಂಡಿದ್ದು, ಹೊಡೆಯುವಂತಹ ಹಕ್ಕನ್ನು ಅವರಿಗೆ ನೀಡಿದ್ದು ಯಾರು ಎನ್ನುವ ಪ್ರತಿರೋಧದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು ಅರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.