ಉಡುಪಿ: ಡಿಸಿ, ನ್ಯಾಯಾಧೀಶೆ, ಮೀನು ಮಾರಾಟಗಾರರಿಗೆ ಶುಭಕೋರಿದ ಮಕ್ಕಳು
ಉಡುಪಿ, ಮಾ.8: ಉದ್ಯಾವರ ಕೊರಂಗ್ರಪಾಡಿ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿಯ ಪುಟಾಣಿಗಳು ಇಂದು ಉಡುಪಿ
ಜಿಲ್ಲಾಧಿಕಾರಿ, ನ್ಯಾಯಾಧೀಶರಿಗೆ ಹಾಗೂ ಮಹಿಳಾ ಮೀನು ಮಾರಾಟಗಾರರಿಗೆ ಉಡುಗೊರೆ ಹಾಗೂ ಹೂವುಗಳನ್ನು ನೀಡುವ ಮೂಲಕ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪುಟಾಣಿಗಳು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮಕ್ಕಳು ಕೈಯಿಂದ ತಯಾರಿಸಿದ ಶುಭಾಶಯ ಕಾರ್ಡ್, ಹೂವು ಹಾಗೂ ಸಿಹಿ ತಿಂಡಿಯನ್ನು ನೀಡಿ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.
ಅದೇ ರೀತಿ ನ್ಯಾಯಾಲಯಕ್ಕೆ ತೆರಳಿದ ಮಕ್ಕಳು ಮಹಿಳಾ ನ್ಯಾಯಾಧೀಶರಾದ ನೂರುನ್ನೀಸಾ ಮತ್ತು ಲಾವಣ್ಯ ಹಾಗೂ ಜಿಲ್ಲಾ ಸರಕಾರಿ ಅಭಿಜಕಿ ಶಾಂತಿ ಭಾಯಿ ಅವರಿಗೆ ಶುಭಾಶಯ ಕೋರಿದರು. ಬಳಿಕ ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ 100 ಮಹಿಳೆಯರಿಗೆ ಹೂವು ನೀಡಿ ಶುಭ ಕೋರಲಾಯಿತು.
ಹಿರಿಯ ಮಹಿಳಾ ಮೀನು ಮಾರಾಟಗಾರರಾದ ತುಕ್ರಿ ಕೋಟ್ಯಾನ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಎಂಇಟಿ ಸ್ಕೂಲ್‌ನ ಆಡಳಿತಾಧಿಕಾರಿ ಖಲೀಲ್ ಅಹ್ಮದ್, ಶಿಕ್ಷಕರು ಉಪಸ್ಥಿತರಿದ್ದರು.