ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ನೈಫಿಯು ರಿಯೊ ಪ್ರಮಾಣ ವಚನ ಸ್ವೀಕಾರ
ಕೋಹಿಮಾ, ಮಾ. 8: ಎನ್‌ಡಿಪಿಪಿಯ ನಾಯಕ ನೈಫಿಯು ರಿಯೊ ಗುರುವಾರ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ರಿಯೋ ಹಾಗೂ ಸಂಪುಟದ 11 ಮಂದಿ ಸಚಿವರಿಗೆ ರಾಜ್ಯಪಾಲ ಪಿ.ಬಿ. ಆಚಾರ್ಯ ಪ್ರಮಾಣ ವಚನ ಬೋಧಿಸಿದರು. ಮೊದಲ ಬಾರಿಗೆ, ನಾಗಾಲ್ಯಾಂಡ್‌ನಲ್ಲಿ ನೂತನವಾಗಿ ಆಯ್ಕೆಯಾದ ಸರಕಾರದ ಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರು ಕೋಹಿಮಾದ ಸ್ಥಳೀಯ ಮೈದಾನದಲ್ಲಿ ಸಾರ್ವಜನಿಕರ ಎದುರೇ ಪ್ರಮಾಣ ವಚನ ಸ್ವೀಕರಿಸಿದರು. ಆಗಿನ ಅಧ್ಯಕ್ಷರಾಗಿದ್ದ ಸರ್ವೇಪಲ್ಲಿ ರಾಧಾಕೃಷ್ಣನ್ 1963 ಡಿಸೆಂಬರ್ 1ರಂದು ನಾಗಾಲ್ಯಾಂಡ್ ರಾಜ್ಯವನ್ನು ಇದೇ ಮೈದಾನದಲ್ಲಿ ಘೋಷಿಸಿದ್ದರು. ಆದುದರಿಂದ ಈ ಮೈದಾನ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಬಾರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಜಾಹೀರಾತಿನ ಮೂಲಕ ಜನ ಸಾಮಾನ್ಯರಿಗೂ ಆಹ್ವಾನ ನೀಡಿತ್ತು. ನಾವು ನಾಗಾಲ್ಯಾಂಡ್‌ನ ಅಭಿವೃದ್ಧಿ ಬಯಸುತ್ತಿದ್ದೇವೆ. ನಾಗಾ ರಾಜಕೀಯ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ನಾವು ಕಠಿಣವಾಗಿ ಶ್ರಮಿಸುತ್ತೇವೆ ಎಂದು ರಿಯೋ ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರದ ಸಹಾಯಕ ಸಚಿವ ಕಿರಣ್ ರಿಜಿಜು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಮಣಿಪುರ ಮುಖ್ಯಮಂತ್ರಿ ಎನ್. ಬೀರೆನ್ ಸಿಂಗ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ ಹಾಗೂ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮೊದಲಾದವರು ಉಪಸ್ಥಿತರಿದ್ದರು.