ಸಿರಿಯದಲ್ಲಿ ‘ಪ್ರಳಯ’ ಸೃಷ್ಟಿಸುತ್ತಿರುವ ಸರಕಾರ: ವಿಶ್ವಸಂಸ್ಥೆ
ಡೌಮ (ಸಿರಿಯ), ಮಾ. 8: ಸಿರಿಯ ರಾಜಧಾನಿ ಡಮಾಸ್ಕಸ್‌ನ ಹೊರವಲಯದ ಬಂಡುಕೋರ ನಿಯಂತ್ರಣದ ಪೂರ್ವ ಘೌಟದ ಸುತ್ತ ಹಾಕಿರುವ ಮುತ್ತಿಗೆಯನ್ನು ಬಿಗಿಗೊಳಿಸಿರುವ ಸರಕಾರವು, ಬುಧವಾರ ಹೆಚ್ಚುವರಿ ಸೇನಾಪಡೆಗಳನ್ನು ಸ್ಥಳಕ್ಕೆ ಕಳುಹಿಸಿದೆ.
ಅದೇ ವೇಳೆ, ಸರಕಾರಿ ಸೈನಿಕರು ನಡೆಸುತ್ತಿರುವ ದಾಳಿಗಳಲ್ಲಿ ನಾಗರಿಕರು ಭಾರೀ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಸಮುದಾಯ ಸಿರಿಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಸರಕಾರವು ಸಿರಿಯದಲ್ಲಿ ‘ಪ್ರಳಯ’ವನ್ನು ಸೃಷ್ಟಿಸುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝೈದ್ ರಅದ್ ಅಲ್-ಹುಸೈನ್ ಆರೋಪಿಸಿದ್ದಾರೆ.
ರಶ್ಯ ಬೆಂಬಲಿತ ಸಿರಿಯ ಸೇನೆಯು ಫೆಬ್ರವರಿ 18ರಿಂದ ಪೂರ್ವ ಘೌಟದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, 810 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 179 ಮಂದಿ ಮಕ್ಕಳು.
ಸಿರಿಯ ಸರಕಾರಿ ಸೈನಿಕರು ಈಗಾಗಲೇ 40 ಶೇಕಡ ಭೂಭಾಗವನ್ನು ಬಂಡುಕೋರರ ವಶದಿಂದ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
‘‘ಕನಿಷ್ಠ 700 ಅಫ್ಘನ್, ಫೆಲೆಸ್ತೀನಿಯನ್ ಮತ್ತು ಸರಕಾರಿ ನಿಷ್ಠ ಬಾಡಿಗೆ ಸೈನಿಕರು ಅಲೆಪ್ಪೊದಿಂದ ಘೌಟಕ್ಕೆ ಮಂಗಳವಾರ ರಾತ್ರಿ ಬಂದಿದ್ದಾರೆ’’ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ಹೇಳಿದ್ದಾರೆ.