×
Ad

ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಶಸ್ತಿ ಘೋಷಿಸಿದ ಜೆಸಿಬಿ

Update: 2018-03-08 21:53 IST

ಹೊಸದಿಲ್ಲಿ,ಮಾ.8: ಭಾರತೀಯ ಲೇಖಕರ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಗುರುತಿಸಿ ಗೌರವಿಸುವ ಮತ್ತು ವಿಭಿನ್ನ ಭಾರತೀಯ ಭಾಷೆಗಳಲ್ಲಿ ಪ್ರತ್ಯೇಕ ಸಾಹಿತ್ಯದ ಅಡ್ಡಗೋಡೆಗಳನ್ನು ತೊಲಗಿಸುವ ಉದ್ದೇಶದಿಂದ ‘ಜೆಸಿಬಿ’ ನೂತನ ಸಾಹಿತ್ಯ ಪ್ರಶಸ್ತಿಯೊಂದನ್ನು ಗುರುವಾರ ಪ್ರಕಟಿಸಿದೆ. 25 ಲ.ರೂ.ಗಳ ಬಹುಮಾನವನ್ನು ಹೊಂದಿರುವ ಇದು ದೇಶದ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಜೆಸಿಬಿ ಸಾಹಿತ್ಯ ಪ್ರಶಸ್ತಿಗೆ ಸಾಹಿತ್ಯ ನಿರ್ದೇಶಕರಾಗಿ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಹಾಗೂ ಪ್ರಬಂಧಕಾರ ರಾಣಾ ದಾಸಗುಪ್ತಾ ಅವರನ್ನು ನೇಮಕ ಮಾಡಲಾಗಿದೆ.

ಭಾರಿ ನಿರ್ಮಾಣ ಯಂತ್ರೋಪಕರಣಗಳ ತಯಾರಕ ಸಂಸ್ಥೆ ಜೆಸಿಬಿ ಇಂಡಿಯಾ ಲಿ.ನ ಆರ್ಥಿಕ ನೆರವಿನೊಂದಿಗೆ ಜೆಸಿಬಿ ಸಾಹಿತ್ಯ ಪ್ರತಿಷ್ಠಾನವು ನೀಡುವ ಈ ಪ್ರಶಸ್ತಿಗೆ ಪ್ರವೇಶಗಳನ್ನು ಸಲ್ಲಿಸಲು ಮೇ 31 ಅಂತಿಮ ದಿನಾಂಕವಾಗಿದೆ.

ಕೃತಿಗಳು ಇಂಗ್ಲಿಷ್ ಭಾಷೆಯಲ್ಲಿರಬೇಕು ಮತ್ತು ಇತರ ಭಾಷೆಗಳ ಕೃತಿಗಳಾಗಿದ್ದರೆ, ಇಂಗ್ಲೀಷ್‌ಗೆ ಅನುವಾದಗೊಂಡಿರಬೇಕು. ಅನುವಾದಿತ ಕೃತಿಯು ಪ್ರಶಸ್ತಿಗೆ ಪಾತ್ರವಾದರೆ ಅನುವಾದಕನಿಗೆ ಐದು ಲ.ರೂ.ಗಳ ಬಹುಮಾನ ನೀಡಲಾಗುವುದು.

ಪ್ರವೇಶಗಳನ್ನು ಆಧರಿಸಿ ಪ್ರತಿ ವರ್ಷದ ಸೆಪ್ಟೆಂಬರ್‌ನಲ್ಲಿ ಲಾಂಗ್‌ಲಿಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುವುದು. ನವೆಂಬರ್‌ನಲ್ಲಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುವುದು. ಶಾರ್ಟ್‌ಲಿಸ್ಟ್ ಆದ ಎಲ್ಲ ಕೃತಿಗಳಿಗೆ ತಲಾ ಒಂದು ಲ.ರೂ.ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News