ಸಚಿವ ರೈ ವಿರುದ್ಧ ಆಕ್ರೋಶಕ್ಕೆ ತಿರುಗಿದ ಅಲ್ಪಸಂಖ್ಯಾತರ ಅತೃಪ್ತಿ
ಮಂಗಳೂರು, ಮಾ. 8: ಮಂಗಳೂರು ಮಹಾನಗರ ಪಾಲಿಕೆಯ ‘ಮೇಯರ್’ ಸ್ಥಾನ ಮುಸ್ಲಿಮ್ ಅಭ್ಯರ್ಥಿಗೆ ನೀಡುವುದಾಗಿ ಎರಡು ವರ್ಷದ ಹಿಂದೆ ಭರವಸೆ ನೀಡಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೊನೆಗೂ ಮುಸ್ಲಿಮರಿಗೆ ‘ಕೈ’ ಕೊಟ್ಟಿದ್ದಾರೆ ಎಂಬ ದೂರು ಪಕ್ಷದ ಅಲ್ಪಸಂಖ್ಯಾತ ನಾಯಕರಿಂದಲೇ ಕೇಳಿ ಬಂದಿದೆ . ಇದರ ಜೊತೆಗೆ, ತಾನು ವಚನಭ್ರಷ್ಟ ಮತ್ತು ಅವಕಾಶವಾದಿ ರಾಜಕಾರಣಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಸಚಿವ ರೈ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿವೆ.
ನಾನು ಅಲ್ಲಾಹನ ಕೃಪೆಯಿಂದ ಗೆದ್ದು ಬಂದೆ. ಇಲ್ಲದಿದ್ದರೆ ಬಂಟ್ವಾಳದಂತಹ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ತಾನು ಗೆಲ್ಲುತ್ತಿರಲಿಲ್ಲ ಎಂದು ತಿಂಗಳ ಹಿಂದೆ ನಗರದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಸಚಿವ ರೈ ಇದೀಗ ತನ್ನ ಸ್ವಾರ್ಥಕ್ಕಾಗಿ ಮುಸ್ಲಿಮರಿಗೆ ‘ಅನ್ಯಾಯ ಎಸಗಿದ್ದಾರೆ’ ಎಂಬ ಅಭಿಪ್ರಾಯ ಪಕ್ಷದ ಕಾರ್ಯಕರ್ತರು, ಅಲ್ಪಸಂಖ್ಯಾತ ಮತದಾರರು ಹಾಗು ಕಾಂಗ್ರೆಸ್ ಬೆಂಬಲಿಗರಿಂದಲೇ ಕೇಳಿ ಬಂದಿದೆ.
ಇದೇ ಮೊದಲ ಬಾರಿಗೆ ಸಚಿವ ರೈ ವಿರುದ್ಧ ಕಾಂಗ್ರೆಸ್ ಪಕ್ಷದ ಅತೃಪ್ತ ಯುವ ಅಲ್ಪಸಂಖ್ಯಾತ ನಾಯಕರ ಗುಂಪೊಂದು ತಿರುಗಿ ಬಿದ್ದಿದ್ದು, ಪಕ್ಷದ ವಿವಿಧ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದಕ್ಕೆ ಕೆಲವು ಮಂದಿ ಹಿರಿಯ ನಾಯಕರು ಸಾಥ್ ನೀಡಿರುವುದು ಚುನಾವಣೆಯ ಸಂದರ್ಭ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ. ಈಗಾಗಲೇ ಮಾಜಿ ಮೇಯರ್ ಹಾಗೂ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪಕ್ಷದೊಳಗಿದ್ದುಕೊಂಡು ಏಕಾಂಗಿಯಾಗಿ ಹೋರಾಟ ಮಾಡುತ್ತಲೇ ರಾಜೀನಾಮೆ ನೀಡಿ ಜೆಡಿಎಸ್ ಸೇರಿದ್ದಾರೆ. ಅದರ ಬೆನ್ನಿಗೇ ಅಲ್ಪಸಂಖ್ಯಾತರು ಒಟ್ಟಾಗಿ ಕಾಂಗ್ರೆಸ್ಸನ್ನೇ ಹೆಚ್ಚಾಗಿ ಬೆಂಬಲಿಸುತ್ತಾ ಬಂದಿರುವ ಮಂಗಳೂರು ನಗರದಲ್ಲಿ ಮುಸ್ಲಿಮರಿಗೆ ‘ನ್ಯಾಯವಾಗಿ’ ಸಿಗಬೇಕಿದ್ದ ಮೇಯರ್ ಸ್ಥಾನವನ್ನು ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರೇ ತಪ್ಪಿಸಿದ್ದಾರೆ ಎಂಬ ಭಾವನೆ ಬಂದಿರುವುದು ಕಾಂಗ್ರೆಸ್‌ಗೆ ತೊಂದರೆಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
5 ವರ್ಷಗಳ ಹಿಂದೆ ಬಂಟ್ವಾಳ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭ ‘ಇದು ನನ್ನ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ನಡುವಿನ ಯುದ್ಧ’ ಎಂದು ಸಚಿವ ರೈ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗಲೇ ಕಲ್ಲಡ್ಕ ಭಟ್ ಮತ್ತು ಸಂಘಪರಿವಾರವನ್ನು ಜಿಲ್ಲೆಯಲ್ಲಿ ನಿಯಂತ್ರಿಸಲು ಸಚಿವ ರೈಗೆ ಸಾಧ್ಯವಾಗಲಿಲ್ಲ ಎಂಬ ಅಸಮಾಧಾನ ಈಗಾಗಲೇ ಇದೆ. ಪೊಲೀಸರು ಅಮಾಯಕ ಮುಸ್ಲಿಮರನ್ನು ಬಂಧಿಸುವಾಗಲೂ ರೈ ನೆರವಿಗೆ ಧಾವಿಸಲಿಲ್ಲ ಎಂಬ ಆರೋಪವೂ ಇದೆ. ಆ ಎಲ್ಲ ನೋವು, ಅಸಮಾಧಾನ ಈಗ ಮೇಯರ್ ಸ್ಥಾನ ‘ತಪ್ಪಿಸಿದ’ ಸಿಟ್ಟಿನೊಂದಿಗೆ ಸೇರಿ ಆಕ್ರೋಶವಾಗಿ ವ್ಯಕ್ತವಾಗುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಪಕ್ಷದ ಮುಖಂಡರು 2 ವರ್ಷದ ಹಿಂದೆ ಮುಂದಿಟ್ಟಾಗ ಕಾಂಗ್ರೆಸ್ ಆಡಳಿತಾವಧಿ ಮುಗಿಯುವ ಮುನ್ನ ಖಂಡಿತಾ ಮೇಯರ್ ಸ್ಥಾನ ಮುಸ್ಲಿಮರಿಗೆ ನೀಡಲಾಗುವುದು ಎಂದು ರೈ ಭರವಸೆ ನೀಡಿದ್ದರು. ಅದರಂತೆ ಈ ಬಾರಿ ರೈಯ ಆಪ್ತ ಮುಸ್ಲಿಂ ಮುಖಂಡರು ಅದನ್ನು ನೆನಪಿಸಿದಾಗ ಚುನಾವಣೆ ಸಂದರ್ಭ ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡಿದರೆ ತಪ್ಪು ಸಂದೇಶ ರವಾನೆಯಾದೀತು, ಬಿಜೆಪಿಗರು ರಾಜಕೀಯ ಅಸ್ತ್ರ ಮಾಡಿಕೊಂಡಾರು ಎಂದು ರೈ ಹೇಳಿದರೆನ್ನಲಾಗಿದೆ. ಅದನ್ನು ಅರಿತ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಕಳೆದ ಶುಕ್ರವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಸಭೆ ನಡೆಸಿ ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡಬೇಕು. ಇಲ್ಲದಿದ್ದರೆ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದರು. ಅಲ್ಲದೆ ಮುಖಂಡರು ಹಾಗು ಉದ್ಯಮಿಗಳ ನಿಯೋಗ ಸಚಿವ ರೈ ಮನೆಗೂ ಭೇಟಿ ನೀಡಿ ಒತ್ತಾಯಿಸಿದ್ದರು. ಆದರೆ ಸಚಿವ ರೈ ಇದ್ಯಾವುದನ್ನೂ ಪರಿಗಣಿಸದೆ ಭಾಸ್ಕರ ಮೊಯ್ಲಿಯನ್ನು ಮೇಯರ್ ಸ್ಥಾನಕ್ಕೆ ಬೆಂಬಲಿಸಿ, ಉಪಮೇಯರ್ ಸ್ಥಾನವನ್ನು ಮುಹಮ್ಮದ್ ಕುಂಜತ್ತಬೈಲ್‌ಗೆ ನೀಡಿ ಮುಸ್ಲಿಮರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ ಎಂಬುದು ಈಗ ಅವರ ವಿರುದ್ಧ ಕೇಳಿ ಬಂದಿರುವ ದೂರು.
ಬಾವ, ಕೋಡಿಜಾಲ್, ಬಿ.ಎಚ್.ಖಾದರ್ ವಿರುದ್ಧವೂ ಅಸಮಾಧಾನ: ‘ಮುಸ್ಲಿಂ ಸಮುದಾಯ’ದ ಕೋಟಾದಲ್ಲೇ ಸ್ಥಾನಮಾನ ಪಡೆದುಕೊಂಡ ಶಾಸಕ ಮೊಯ್ದಿನ್ ಬಾವ, ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್ ರಂತಹ ನಾಯಕರು ನಿರ್ಣಾಯಕ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡದೆ ಸುಮ್ಮನಾಗಿದ್ದಾರೆ ಎಂದು ಪಕ್ಷದೊಳಗೆ ಹಾಗು ಹೊರಗೆ ಅಸಮಾಧಾನ ವ್ಯಕ್ತವಾಗಿದೆ.
ಭಾಸ್ಕರ್ ಮೊಯ್ಲಿ ವಿರುದ್ಧ ಅಸಮಾಧಾನವಿಲ್ಲ : ಮೇಯರ್ ಆಗಿ ಆಯ್ಕೆಯಾಗಿರುವ ಭಾಸ್ಕರ್ ಮೊಯ್ಲಿ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಈ ಬಾರಿ ಆ ಸ್ಥಾನ ನ್ಯಾಯವಾಗಿ ಮುಸ್ಲಿಂ ಅಭ್ಯರ್ಥಿಗೆ ಸಿಗಬೇಕಿತ್ತು ಎಂಬುದು ಮಾತ್ರ ನಮ್ಮ ದೂರು ಎಂಬುದು ಈ ಅತೃಪ್ತರ ಅಳಲು.
ಸ್ಥಾನಕ್ಕಷ್ಟೇ ರಾಜೀನಾಮೆ: ಪಕ್ಷಕ್ಕಲ್ಲ
ನಾವು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ. ನಮಗೆ ಪಕ್ಷ ನೀಡಿರುವ ವಿವಿಧ ಜವಾಬ್ದಾರಿಗೆ ರಾಜೀನಾಮೆ ನೀಡುವೆವು. ಚುನಾವಣೆಯ ಸಂದರ್ಭ ಇಷ್ಟು ಸಾಕು. ಆ ಮೂಲಕ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸುವೆವು ಎಂದು ಅತೃಪ್ತ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ
ಬ್ಯಾರಿ ಮುಸ್ಲಿಮರು ಬ್ಯಾನರ್ ಕಟ್ಟಲು, ಪೋಸ್ಟರ್ ಅಂಟಿಸಲು ಮಾತ್ರ ಲಾಯಕ್ಕು ಎಂದು ಸಚಿವ ರೈ ಭಾವಿಸಿದಂತಿದೆ. ಆದರೆ ಆ ಕಾಲ ಹೋಯ್ತು. ಮುಸ್ಲಿಮರು ನಾಯಕರಾಗಲೂ ಅರ್ಹರು ಎಂಬುದನ್ನು ತೋರಿಸಿಕೊಡುತ್ತೇವೆ ಎಂಬರ್ಥದ ಸಂದೇಶ ರವಾನೆಯೊಂದಿಗೆ ಸಚಿವ ರೈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.