×
Ad

ಐಸಿಎಂಆರ್‌ನಿಂದ ಶಿಶು ಮರಣ, ತಾಯಿ ಮರಣ ತಡೆಗೆ ಕ್ರಮ: ಡಾ.ಅಂಜು ಸಿನ್ಹಾ

Update: 2018-03-08 22:11 IST

ಮಣಿಪಾಲ, ಮಾ.8: ಹೊಸದಿಲ್ಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ (ಐಸಿಎಂಆರ್) ಭಾರತೀಯ ಮಹಿಳೆಯರ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಹಿಳೆಯರ ಆರೋಗ್ಯ ಸುಧಾರಣೆಯ ಕುರಿತಂತೆ ಹಲವು ಕ್ರಮಗಳನ್ನು ಕೈಗೊಳ್ಳುತಿದ್ದು, ಈಗ ಆತಂಕಕಾರಿ ಮಟ್ಟದಲ್ಲಿರುವ ತಾಯಿ ಮರಣ ಹಾಗೂ ಶಿಶು ಮರಣದ ತಡೆಗೂ ವಿಶೇಷ ಕ್ರಮಗಳನ್ನು ಅನುಷ್ಠಾನ ಗೊಳಿಸುತಿದೆ ಎಂದು ಐಸಿಎಂಆರ್‌ನ ಉಪ ಮಹಾ ನಿರ್ದೇಶಕಿ ಡಾ.ಅಂಜು ಸಿನ್ಹಾ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಈ ನಿಟ್ಟಿನಲ್ಲಿ ಮಹಿಳೆಯರಿಗೆ ಅರಿವು ಮೂಡಿಸಲು ಹಾಗೂ ತರಬೇತಿ ನೀಡಲು ಐಸಿಎಂಆರ್ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜಸ್ತಾನ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ಸು ಕಾಣಲಾಗಿದೆ ಎಂದು ಡಾ.ಸಿನ್ಹಾ ನುಡಿದರು.

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಕಾರ್ಯಕ್ಕೆ ಆದ್ಯತೆಯನ್ನು ನೀಡಲಾಗುತ್ತಿದೆ. ಮಹಿಳೆಯರಿಗೆ ರಾಜಕೀಯವಾಗಿ ಹಾಗೂ ಆರ್ಥಿಕವಾಗಿಯೂ ಸಮಾನತೆ ದೊರೆಯಬೇಕಾಗಿದೆ. ಆಗ ಮಾತ್ರ ದೇಶದ ಮಹಿಳೆಯರ ಸಬಲೀಕರಣ ಪ್ರಕ್ರಿಯೆ ಒಂದು ಹಂತದ ಯಶಸ್ಸನ್ನು ಕಾಣಲು ಸಾಧ್ಯವಾಗಲಿದೆ. ಈ ದಿಶೆಯಲ್ಲಿ 2030 ಮಿಷನ್ ಗುರಿಯೊಂದಿಗೆ ಕಾರ್ಯಯೋಜನೆಯನ್ನು ರೂಪಿಸಲಾಗಿದೆ ಎಂದರು.

ಆದರೆ ಭಾರತದಂಥ ವೈವಿಧ್ಯಮಯ, ವಿಶಾಲ ದೇಶದಲ್ಲಿ ಇದು ಸುಲಭ ಸಾಧ್ಯವಿಲ್ಲ. ಈಗಲೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.55 ಆಗಿದೆ. ಈಗಲೂ ಇಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳ ವಿವಾಹ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಶೇ.47.4ರಷ್ಟು ಬಾಲ್ಯವಿವಾಹ ನಡೆಯುತ್ತಿದೆ. ಕಚೇರಿಗಳಲ್ಲಿ ಈಗಲೂ ದೊಡ್ಡ ಮಟ್ಟದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಕಾನೂನು ಈಗಲೂ ಮಹಿಳೆಯರ ಕುರಿತಂತೆ ತಾರತಮ್ಯ ಧೋರಣೆಯನ್ನು ಹೊಂದಿದೆ ಎಂದರು.

ರಾಜ್ಯಸ್ಥಾನದಲ್ಲಿ ಈಗಲೂ ದೊಡ್ಡ ಮಟ್ಟದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ. ಇವುಗಳನ್ನೆಲ್ಲವನ್ನೂ ಮೀರಿ ಕೇಂದ್ರ ಸರಕಾರ ಹೆಣ್ಣು ಮಕ್ಕಳ ಕುರಿತಂತೆ ಹಲವು ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುತ್ತಿದೆ. ಭೇಟಿ ಬಚಾವೊ- ಭೇಟಿ ಪಡಾವೊ, ಸುಕನ್ಯಾ ಸಮೃದ್ಧ ಯೋಜನಾ, ಉಜ್ವಲ, ಮುದ್ರಾ ಮುಂತಾದ ಯೋಜನೆಗಳು ಹೆಣ್ಣು ಮಕ್ಕಳನ್ನೇ ದೃಷ್ಟಿಯಲ್ಲಿಟ್ಟು ಜಾರಿ ಗೊಳಿಸಲಾಗಿದೆ ಎಂದು ಡಾ.ಅಂಜು ಸಿನ್ಹಾ ನುಡಿದರು.

ಶಿಶು ಮರಣ ಹಾಗೂ ತಾಯಿ ಮರಣದಲ್ಲಿ ಭಾರತ ಈಗಲೂ ವಿಶ್ವದಲ್ಲಿ ಮೊದಲೆರಡು ಸ್ಥಾನದಲ್ಲಿದೆ. ಪ್ರತಿ ಗಂಟೆಗೆ ಐದು ತಾಯಿ ಮರಣ ಇಲ್ಲಿ ಸಂಭವಿಸುತ್ತಿದೆ.ಇದಕ್ಕೆ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸರಿಯಾದ ತಿಳುವಳಿಕೆ, ಮಾಹಿತಿ ಇಲ್ಲದಿರುವುದೇ ಕಾರಣವಾಗಿದೆ. ಹಳ್ಳಿಗಳಲ್ಲಿ ಸುರಕ್ಷಿತ ತಾಯ್ತನವನ್ನು ಈಗಲೂ ಪಾಲಿಸಲಾಗುತ್ತಿಲ್ಲ.ಆರೋಗ್ಯ ಹಾಗೂ ವೈದ್ಯಕೀಯ ಸೌಲಭ್ಯ ಈಗಲೂ ತೀರಾ ಹಿಂದಿದೆ. ಕಳಪೆ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಕೌಶಲ್ಯ ರಹಿತ ಹೆರಿಗೆ ವಿಧಾನ ತಾಯಿ-ಮಗುವಿನ ಸಾವಿಗೆ ಪ್ರಧಾನ ಕಾರಣಗಳಾಗಿರುತ್ತವೆ ಎಂದರು.

ಇದಕ್ಕಾಗಿ ಉತ್ತರ ಭಾರತದ ಆಯ್ದ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರ ರೀತಿಯಲ್ಲಿ ಆರೋಗ್ಯ ಕಾರ್ಯಕರ್ತೆಯರನ್ನು ತರಬೇತಿ ನೀಡಿ ನೇಮಿಸಲಾಗುತ್ತಿದೆ. ಇದರಿಂದ ಪರಿಸ್ಥಿತಿಯಲ್ಲಿ ದೊಡ್ಡಮಟ್ಟದ ಬದಲಾವಣೆ ಕಾಣಿಸಿಕೊಂಡಿದೆ ಎಂದು ಡಾ.ಸಿನ್ಹಾ ಹೇಳಿದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಹಿಳೆಯರಿಗಾಗಿ ಮಾಹೆಯ ಪ್ರತ್ಯೇಕ ವೆಬ್‌ಸೈಟ್‌ನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಹೆ ಪ್ರೊ ವೈಸ್‌ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯ ನಿರ್ದೇಶಕಿ ಡಾ.ಪಾರ್ವತಿ ಭಟ್, ಇಂದಿರಾ ಬಲ್ಲಾಳ್, ಡಾ.ಸಂಧ್ಯಾ ನಂಬಿಯಾರ್, ಡಾ.ರೇವತಿ ಕಸ್ತೂರಿ, ಡಾ.ಗಾಯತ್ರಿ ಪ್ರಭು ಮುಂತಾದವರು ಉಪಸ್ಥಿತರಿದ್ದರು.ಡಾ.ಅನಿತಾ ಎಸ್.ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News