ಬಿಜೆಪಿ ನಾಯಕ ರಾಜಾರಿಂದ ಅನಾಗರಿಕ ಹೇಳಿಕೆ : ರಜಿನೀಕಾಂತ್
ಚೆನ್ನೈ, ಮಾ.8: ದ್ರಾವಿಡ ಆಂದೋಲನದ ಸ್ಥಾಪಕ ಇ.ವಿ.ರಾಮಸಾಮಿ ಪೆರಿಯಾರ್ ಬಗ್ಗೆ ಬಿಜೆಪಿ ಮುಖಂಡ ಎಚ್.ರಾಜಾ ನೀಡಿರುವ ವಿವಾದಾಸ್ಪದ ಹೇಳಿಕೆ ಅನಾಗರಿಕವಾದುದು ಎಂದು ಖ್ಯಾತ ತಮಿಳು ಸಿನೆಮಾ ನಟ ರಜಿನೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ರಾಜಾ ಹೇಳಿಕೆಗೆ ಬಿಜೆಪಿ ಮುಖಂಡರು ವಿಷಾದ ವ್ಯಕ್ತಪಡಿಸಿರುವ ಕಾರಣ ಈ ವಿಷಯವನ್ನು ಮತ್ತಷ್ಟು ಬೆಳೆಸುವುದು ಬೇಡ ಎಂದವರು ಜನತೆಗೆ ಮನವಿ ಮಾಡಿದ್ದಾರೆ.
ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ತಿರುಪಟ್ಟೂರು ಎಂಬಲ್ಲಿದ್ದ ಪೆರಿಯಾರ್ ಪ್ರತಿಮೆಯನ್ನು ಮಾರ್ಚ್ 6ರಂದು ವಿರೂಪಗೊಳಿಸಲಾಗಿತ್ತು. ಈ ಘಟನೆಗೂ ಮೊದಲು ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ತಮಿಳುನಾಡಿನ ಬಿಜೆಪಿ ಮುಖಂಡ ಎಚ್.ರಾಜಾ, ತ್ರಿಪುರದಲ್ಲಿ ಲೆನಿನ್ ಪ್ರತಿಮೆಗೆ ಆದ ಗತಿಯೇ ತಮಿಳಿನ ವಿಚಾರವಾದಿ ಮುಖಂಡನ ಪ್ರತಿಮೆಗೆ ಆಗಲಿದೆ ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಪೆರಿಯಾರ್ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು.
ರಾಜಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಇದು ರಾಜ ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದರು. ಬಳಿಕ ಈ ಹೇಳಿಕೆಯನ್ನು ಡಿಲೀಟ್ ಮಾಡಲಾಗಿತ್ತು ಮತ್ತು ಬಿಜೆಪಿ ಮುಖಂಡರು ವಿಷಾದ ಸೂಚಿಸಿದ್ದರು.