6 ವರ್ಷ ವಯಸ್ಸಿನ ಬಾಲಕಿಯ ಹೃದಯ 9 ವರ್ಷದ ಬಾಲಕನಿಗೆ ಕಸಿ
ಮಂಗಳೂರು, ಮಾ. 9: ಚಿತ್ರದುರ್ಗ ಮೂಲದ 6 ವರ್ಷ ಪ್ರಾಯದ ಬಾಲಕಿಯ ಹೃದಯವನ್ನು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಬೋನಿ ಗ್ರಾಮದ 9 ವರ್ಷದ ಬಾಲಕನಿಗೆ ಗುರುವಾರ ಕಸಿ ಮಾಡಲಾಗಿದೆ.
ಮಿದುಳಿನಲ್ಲಿ ಗಡ್ಡೆ (ಮನಿಂಜಿಯೋಮಾ) ಎಂಬ ರೋಗದಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿಯ ಮಿದುಳು ನಿಷ್ಕ್ರಿಯಗೊಂಡಿತು. ಬಳಿಕ ಆಸ್ಪತ್ರೆಯ ವೈದ್ಯರು ಅಂಗಾಂಗ ದಾನಕ್ಕೆ ಬಾಲಕಿಯ ಪೋಷಕರ ಮನವೊಲಿಸಿದರು. ಬಾಲಕಿಯ ಮನೆಯವರು ಒಪ್ಪಿಗೆ ಸೂಚಿಸಿದೊಡನೆ ಬಾಲಕಿಯ ಹೃದಯವನ್ನು ಸಂಗ್ರಹಿಸಿ ಬೆಂಗಳೂರಿನ ಎಂ.ಎಸ್. ರಾಮಯ್ಯ ದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಹೃದಯ ಕವಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕನಿಗೆ ಕಸಿ ಮಾಡಲಾಯಿತು.
ಎ.ಜೆ. ಆಸ್ಪತ್ರೆಯ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದು ಖಚಿತಪಡಿಸಿದ ನಂತರ ಬೆಂಗಳೂರಿನ ವೈದ್ಯರ ತಂಡ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿ ಬಾಲಕಿಯ ಹೃದಯವನ್ನು ಏರ್ ಆ್ಯಂಬುಲೆನ್ಸ್ ಮೂಲಕ ಗುರುವಾರ ಸಂಜೆ 5:30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದರು. ವಿಮಾನ ನಿಲ್ದಾಣದಿಂದ 36 ಕಿ.ಮೀ. ದೂರದಲ್ಲಿರುವ ಎಮ್. ಎಸ್. ರಾಮಯ್ಯ ಆಸ್ಪತ್ರೆಗೆ ಸಂಚಾರಿ ಪೊಲೀಸರ ಹಸಿರು ಪಥ ವ್ಯವಸ್ಥೆಯೊಂದಿಗೆ (ಗೀನ್ ಕಾರಿಡಾರ್) ಕೇವಲ 24 ನಿಮಿಷಗಳಲ್ಲಿ ತಲುಪಿದರು.
ಹೃದಯ ಕಸಿಯನ್ನು ಎಂ.ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರಾದ ಯು. ಎಂ. ನಾಗಮಲ್ಲೇಷ್, ಡಾ. ರವಿಶಂಕರ್ ಶೆಟ್ಟಿ, ಡಾ. ಜೂಲಿಯೆಸ್ ಪುನ್ನೆನ್, ಡಾ. ಶಿಲ್ಪಾ ರುದ್ರ ದೇವರು, ಡಾ. ಪ್ರಶಾಂತ್ ರಾಮಮೂರ್ತಿ ಯಶಸ್ವಿಯಾಗಿ ನೆರವೇರಿಸಿದರು.
ಮೂವರಿಗೆ ಜೀವದಾನ: ಬಾಲಕಿಯ ಹೃದಯವನ್ನು 9 ವರ್ಷದ ಬಾಲಕಿಗೆ ಮತ್ತು ಲಿವರನ್ನು 9 ವರ್ಷದ ಇನ್ನೋರ್ವ ಬಾಲಕನಿಗೆ ಬೆಂಗಳೂರಿನ ಆಸ್ಪತ್ರೆ ಗಳಲ್ಲಿ ಕಸಿ ಮಾಡಲಾಗಿದೆ. ಕಿಡ್ನಿಯನ್ನು ಎ.ಜೆ. ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ. ಕಾರ್ನಿಯಗಳನ್ನು ನೇತ್ರ ಬ್ಯಾಂಕ್‌ನಲ್ಲಿಡಲಾಗಿದೆ. ಮಗುವಿನ ಎರಡೂ ಕಿಡ್ನಿಯನ್ನು ವಯಸ್ಕ ರೋಗಿಗೆ ಎ.ಜೆ. ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ. ಇದೊಂದು ಅಪರೂಪದ ಹಾಗೂ ಅತ್ಯಂತ ನಿಖರ ಶಸ್ತ್ರಚಿಕಿತ್ಸೆಯಾಗಿದ್ದು, ಈ ಶಸ್ತ್ರಚಿಕಿತ್ಸೆಯು ಅತ್ಯಂತ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಅಂಗಾಂಗ ಪಡೆದ ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಮತ್ತು ಕಿಡ್ನಿ ಕಸಿ ತಜ್ಞ ಡಾ. ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.