ಕುಡಿದು ಚಾಲನೆ ಮಾಡಿದವರ ವೀಡಿಯೊ ರೆಕಾರ್ಡಿಂಗ್ ಮಾಡಿ ಪ್ರಕರಣ ದಾಖಲು
ಮಂಗಳೂರು, ಮಾ. 9: ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಬಸ್, ರಿಕ್ಷಾ, ಕಾರು, ಬೈಕ್ ಮತ್ತಿತರ ವಾಹನಗಳ ಚಾಲಕರ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಬಗ್ಗೆ ವೀಡಿಯೊ ರೆಕಾರ್ಡಿಂಗ್ ಮಾಡಿ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು.
ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸಿಟಿ ಬಸ್ ಕಾರ್ಮಿಕರಿಗೆ ತರಬೇತಿಯನ್ನು ಏರ್ಪಡಿಸಿ ವಾಹನ ಚಾಲನೆ ಮತ್ತು ಸಾರ್ವಜನಿಕರ ಜತೆ ವ್ಯವಹರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದ್ದರೂ ಬಸ್ ಸಿಬ್ಬಂದಿ ಸುಧಾರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಇನ್ನು ಮುಂದೆ ನೋಟಿಸ್ ನೀಡುವುದಿಲ್ಲ, ವೀಡಿಯೊ ಚಿತ್ರೀಕರಣ ಮಾಡಿ ನೇರವಾಗಿ ಕೇಸು ದಾಖಲಿಸಲಾಗುವುದು ಎಂದರು.
ಮೀನಿನ ಲಾರಿಗಳು ರಸ್ತೆಯಲ್ಲಿ ನೀರು ಚೆಲ್ಲುತ್ತಾ ಸಾಗುತ್ತಿರುವ ಬಗೆಗಿನ ದೂರುಗಳಿಗೆ ಉತ್ತರಿಸಿದ ಕಮಿಷನರ್, ಈ ಕುರಿತಂತೆ ಮೀನಿನ ಲಾರಿಗಳನ್ನು ನಿರ್ಗಮನ ಪಾಯಿಂಟ್‌ನಲ್ಲಿ (ಹಳೆ ಬಂದರು) ತಪಾಸಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಜ್ಯೋತಿ ಜಂಕ್ಷನ್- ಪಳ್ನೀರ್ ಬಲ್ಮಠ ನ್ಯೂರೋಡ್‌ನಲ್ಲಿ ಜಾರಿಗೊಳಿಸಲಾಗಿರುವ ವನ್ ವೇ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು. ಈ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವನ್ ವೇ ವ್ಯವಸ್ಥೆ ಮಾಡಲಾಗಿದ್ದು, ಈ ಬಗ್ಗೆ ಹಲವಾರು ಜನರಿಂದ ಆಕ್ಷೇಪಣೆಗಳು ಬಂದಿವೆ. ಆದ್ದರಿಂದ ಒನ್ ವೇ ವ್ಯವಸ್ಥೆಯನ್ನು ಸಡಿಲುಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ನರ್ಮ್ ಬಸ್ಸುಗಳು ಕೆಲವು ಮಾರ್ಗಗಳಲ್ಲಿ ರಾತ್ರಿ ಏಳೂವರೆ ಗಂಟೆ ಬಳಿಕ ಓಡಾಡುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕಮಿಷನರ್ ತಿಳಿಸಿದರು.
ಇದು 74 ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 32 ಕರೆಗಳು ಬಂದವು. ಡಿಸಿಪಿಡಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವೆಲೆಂಟೈನ್ ಡಿಸೋಜ, ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಕಾಶ್, ಕುಮಾರಸ್ವಾಮಿ, ಚಂದ್ರ, ಎಎಸ್ಸೈ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಜತೆ ಕಾರ್ಯದರ್ಶಿ ರಾಮಚಂದ್ರ ಪಿಲಾರು ಉಪಸ್ಥಿತರಿದ್ದರು.