×
Ad

ಬಂಟ್ವಾಳ ವಿಧಾನಸಭಾ ಕ್ಷೇತ್ರ: ಎಸ್‌ಡಿಪಿಐ ಅಭ್ಯರ್ಥಿಯಾಗಿ ರಿಯಾಝ್ ಫರಂಗಿಪೇಟೆ

Update: 2018-03-09 19:58 IST

ಬಂಟ್ವಾಳ, ಮಾ. 9: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿ ರಿಯಾಝ್ ಫರಂಗಿಪೇಟೆ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರು ಶುಕ್ರವಾರ ಘೋಷಣೆ ಮಾಡಿದ್ದಾರೆ.

ಇಂದು ಸಂಜೆ ಅಲ್ ಖಝಾನ ಸಮುದಾಯದ ಭವನದಲ್ಲಿ ನಡೆದ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಸಾಬ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ನಂತರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ವಿಧಾನಸಭೆಗೆ ಓರ್ವ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಳುಹಿಸಿಯೇ ತೀರುವೆವು. ಈ ಗೆಲುವು 10 ವರ್ಷಗಳ ಪರಿಶ್ರಮದ ಮುನ್ನುಡಿ ಯಾಗಲಿದೆ. ಇದಕ್ಕಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಂಟ್ವಾಳದಲ್ಲಿ ಸಂಘಟನೆಯು ಪ್ರಬಲವಾಗಿ ಬೇರೂರಿದ್ದು, ಇಲ್ಲಿ ಅನೇಕ ಮುಸ್ಲಿಂ, ದಲಿತ ನಾಯಕರಿದ್ದಾರೆ. ಪಕ್ಷದ, ಸಂಘಟನೆಯ ಕಾರ್ಯಕರ್ತರ ಬಲಿದಾನವಾದ ಮಣ್ಣಿದು. ಇಲ್ಲಿಂದಲೇ ಪಕ್ಷ ನೆಲೆನಿಲ್ಲಲಿ ಎಂದ ಅವರು, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋತ ನಾವು ಈ ಬಾರಿ ನಿರ್ಣಾಯಕರಾಗಲಿದ್ದೇವೆ ಎಂದು ಹೇಳಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಪಕ್ಷದ ಎಲ್ಲ ಜವಾಬ್ದಾರಿಯನ್ನು ತಾನು ಪ್ರಮಾಣಿಕವಾಗಿ ನಿಭಾಯಿಸಿದ್ದೇನೆ. ಹೆಸರು ಅಥವಾ ಪ್ರತಿಷ್ಠೆಗಾಗಿ ತನ್ನ ಸ್ಪರ್ಧೆಯಲ್ಲ. ಮುಸ್ಲಿಂ ಹಾಗೂ ದಲಿತ ಸಮುದಾಯ ಧ್ವನಿಯಾಗಿ ಈ ಹೋರಾಟ. ಇದಕ್ಕೆ ಪಕ್ಷದ ಕಾರ್ಯಕರ್ತರು ತನ್ನೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಬಲವಾಗಿ ನೆಲೆನಿಂತಿದ್ದ ಜಾತ್ಯತೀತ ಪಕ್ಷ ಎಂದು ಕರೆಸಿಕೊಳ್ಳುವ ಜೆಡಿಎಸ್, ಬಿಎಸ್ಪಿ, ಸಿಪಿಎಂ, ಕಾಂಗ್ರೆಸ್ ನೆಲ ಕಚ್ಚಿದೆ. ಮೋಸದ ಆಟದ ಮೂಲಕ ದೇಶದ 21 ರಾಜ್ಯಗಳು ಬಿಜೆಪಿ ಪಾಲಾಗಿದೆ. ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದ ಅವರು, ರಾಷ್ಟ್ರಧ್ವಜ ಹಾಗೂ ಸಂವಿಧಾನ ವಿರೋಧಿಗಳಾದ ಮನುವಾದಿಗಳು ದೇಶವನ್ನು ಆಳುವಂತಾಗಿದೆ ಎಂದು ಹೇಳಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅತ್ತಾವುಲ್ಲ ಜೋಕಟ್ಟೆ ಪ್ರಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಎಚ್. ಅಧ್ಯಕ್ಷತೆ ವಹಿಸಿದ್ದರು. ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೆ., ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್, ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಯಾಝ್, ಬಂಟ್ವಾಳ ಪುರಸಭಾ ಸದಸ್ಯ ಮುನೀಷ್ ಅಲಿ, ಇಕ್ಬಾಲ್ ಐ.ಎಂ.ಆರ್, ಸಜಿಪ ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜಿಪ, ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಬಂಟ್ವಾಳ ಅಧ್ಯಕ್ಷ ಇಜಾಝ್, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಆನಂದ್ ಮಿತ್ತಬೈಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಕಾರ್ಯದರ್ಶಿ ಅಶ್ರಫ್ ಮಂಚಿ, ಎಸ್‌ಡಿಟಿಯು ಜಿಲ್ಲಾ ಸಂಚಾಲಕ ಯೂಸುಫ್ ಆಲಡ್ಕ ಮತ್ತಿತರರು ಇದ್ದರು.

ಅಬ್ದುಲ್ ಖಾದರ್ ಪುತ್ತೂರು ಅವರನ್ನು ಚುನಾವಣಾ ವೀಕ್ಷಕರಾಗಿ ಹಾಗೂ ಶಾಹುಲ್ ಎಸ್.ಎಚ್. ಅವರನ್ನು ಸಹಾಯಕರಾಗಿ ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಪಕ್ಷದ ಸಿದ್ಧಾಂತವನ್ನು ಒಪ್ಪಿ ಎಸ್‌ಡಿಪಿಐಗೆ ಸೇರ್ಪಡೆಗೊಂಡರು. ಇದೇ ವೇಳೆ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಸಾಬ್ ಹಾಗೂ ಎಸ್‌ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಅವರನ್ನು ಪಕ್ಷದ ವತಿಯಿಂದ ಗೌರವಿಸಲಾಯಿತು.

ಇಸ್ಮಾಯಿಲ್ ಬಾವ ಸ್ವಾಗತಿಸಿ, ಸತ್ತಾರ್ ವಂದಿಸಿದರು. ಮಾಲಿಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News