ರೌಡಿ ನವೀನ್ ಡಿಸೋಜ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ
ಉಡುಪಿ, ಮಾ.8: ಸಾಂತೂರು ಗ್ರಾಮದ ಕಾಂಜರಕಟ್ಟೆ ಬಾರ್ ಬಳಿ ಫೆ.28 ರಂದು ರಾತ್ರಿ ನಡೆದ ರೌಡಿ ಶೀಟರ್ ನವೀನ್ ಡಿಸೋಜ(41) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಈ ಕುರಿತು ಮಾಹಿತಿ ನೀಡಿದರು. ಇನ್ನಾ ಮಡ್ಮಣ್ ಗುತ್ತು ನಿವಾಸಿ ಕಿಶನ್ ಹೆಗ್ಡೆ(32), ಕುಂಜಿಬೆಟ್ಟು ಗುಂಡಿಬೈಲಿನ ರಮೇಶ್ ಪೂಜಾರಿ(43), ಪಲಿಮಾರು ರಾಜೀವ ನಗರದ ಮಹೇಶ್ ಗಾಣಿಗ (31), ಪಡುಬಿದ್ರೆ ಅಬ್ಬೇಡಿ- ಮಟ್ಟು ರಸ್ತೆಯ ಮೋಹನ್‌ಚಂದ್ರ ವಿ.ಶೆಟ್ಟಿ(23), ಉಪ್ಪೂರು ಕೊಳಲಗಿರಿಯ ನಾಗರಾಜ ಪೂಜಾರಿ(18) ಎಂಬವರು ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಾಲ್ಕು ತಲವಾರು, ಮಾರುತಿ ಸ್ವಿಫ್ಟ್ ಕಾರು ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣ ಕಾಸಿನ ವಿವಾದ ಮತ್ತು ವೈಷಮ್ಯವೇ ಕೊಲೆಗೆ ಕಾರಣ. ಮಹೇಶ್ ಗಾಣಿಗನನ್ನು ಮಾ.8ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಪ್ರಕರಣದ ವಿವರ: ಕಾಂಜರಕಟ್ಟೆ ಎಂಬಲ್ಲಿರುವ ಗ್ಲೋರಿಯಾ ಬಾರ್ ಬಳಿ ಬೈಕ್‌ನಲ್ಲಿ ಗಿರೀಶ್ ಹಾಗೂ ನಾಗೇಶ್ ಎಂಬವರೊಂದಿಗೆ ಹೋಗುತ್ತಿದ್ದ ನವೀನ್ ಡಿಸೋಜನನ್ನು ಸ್ವಿಫ್ಟ್ ಕಾರಿನಲ್ಲಿ ಬಂದ ಆರೋಪಿಗಳು ತಲವಾರಿನಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ವೇಳೆ ನವೀನ್ ಡಿಸೋಜ ನೊಂದಿಗೆ ಇದ್ದ ಗಿರೀಶ್ ಹಾಗೂ ನಾಗೇಶ್ ಬಾರ್‌ನ ಒಳಗೆ ಓಡಿಹೋಗಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ವಿ.ಎಸ್.ಹಾಲಮೂರ್ತಿ ರಾವ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು, ಮೃತ ನವೀನ್ ಡಿಸೋಜನೊಂದಿಗೆ ವೈರತ್ವ ಇರುವ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಯಿತು. ಬಾರ್‌ನಲ್ಲಿ ಈ ಘಟನೆ ನಡೆದ ಸಂದರ್ಭ ನೋಡಿದ ಸಾಕ್ಷಿದಾರರು ಹಾಗೂ ಸಿಸಿ ಕ್ಯಾಮೆರಾ ಫೂಟೇಜ್ ಪಡೆದು ತನಿಖೆ ನಡೆಸಲಾಯಿತು. ಇದರಿಂದ ಈ ಕೊಲೆಯನ್ನು ಪಡುಬಿದ್ರೆ ಠಾಣೆಯ ರೌಡಿ ಶೀಟರ್ ಕಿಶನ್ ಹೆಗ್ಡೆ ಹಾಗೂ ಇತರ ನಾಲ್ವರು ನಡೆಸಿರುವುದು ತಿಳಿದು ಬಂತು.
ಕೊಲೆಯ ಹಿನ್ನೆಲೆ: ತನಿಖೆ ಮುಂದುವರೆಸಿದ ಪೊಲೀಸರು ಖಚಿತ ಮಾಹಿತಿಯಂತೆ ಮುಲ್ಕಿ ಬಪ್ಪನಾಡು ಬಳಿ ಮಾ.8ರಂದು ಮಧ್ಯಾಹ್ನ 3ಗಂಟೆಗೆ ಮಹೇಶ್ ಗಾಣಿಗನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು.
"ಕಿಶನ್ ಹೆಗ್ಡೆಗೆ ನವೀನ್ ಡಿಸೋಜ ನಾಲ್ಕು ಲಕ್ಷ ರೂ. ಸಾಲ ನೀಡಿದ್ದನು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಧ್ವೇಷ ಉಂಟಾಗಿತ್ತು. ನವೀನ್ ಡಿಸೋಜ, ಕಿಶನ್ ಹೆಗ್ಡೆಯ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ತಿಳಿದು ಕಿಶನ್ ಹೆಗ್ಡೆ ನನ್ನ ಬಳಿ ತಿಳಿಸಿದ್ದನು. 15 ದಿನಗಳ ಹಿಂದೆ ಗ್ಲೋರಿಯ ಬಾರ್‌ನಲ್ಲಿ ನಾನು ಮತ್ತು ನವೀನ್ ಡಿಸೋಜ ಕುಡಿಯುತ್ತಿರುವಾಗ ಗಲಾಟೆ ಮಾಡಿ ನಂತರ ಮನೆಗೆ ಮಾಂಸ ಕೊಡುವುದಾಗಿ ಕರೆದುಕೊಂಡು ಹೋಗಿ ಆತನ ತಾಯಿಯಿಂದ ಜಗಳ ಮಾಡಿಸಿ ನನ್ನನ್ನು ಮುಗಿಸುವುದಾಗಿ ಹೇಳಿದ್ದನು. ಹೀಗೆ ನಾವಿಬ್ಬರು ಸೇರಿ ನವೀನ್ ಡಿಸೋಜನ ಕೊಲೆಗೆ ಸಂಚು ರೂಪಿಸಿದ್ದೆವು" ಎಂದು ವಿಚಾರಣೆ ವೇಳೆ ಮಹೇಶ್ ಗಾಣಿಗ ಕೊಲೆಯ ರಹಸ್ಯವನ್ನು ಬಹಿರಂಗ ಪಡಿಸಿದನು.
ಈ ಕೃತ್ಯ ಎಸಗಲು ಸಹಾಯ ಮಾಡಿದರೆ ಹಣ ನೀಡುವುದಾಗಿ ಕಿಶನ್ ಹೆಗ್ಡೆ ಹೇಳಿದ್ದನು. ಹಾಗೆ ಇತರ ಮೂವರನ್ನು ಕರೆಸಿ ಎರಡು ಲಕ್ಷ ರೂ. ಹಣ ಮತ್ತು ಪುಣೆಯಲ್ಲಿ ಕೆಲಸ ಕೊಡಿಸುವುದಾಗಿ ಕಿಶನ್ ಹೆಗ್ಡೆ ಭರವಸೆ ನೀಡಿದ್ದನು. ಅದರಂತೆ ಐವರು ಸೇರಿ ಈ ಕೊಲೆ ಎಸಗಿದ್ದು, ನಂತರ ಕಿಶನ್ ಹೆಗ್ಡೆ ಕಾರನ್ನು ಚಲಾಯಿಸಿಕೊಂಡು ಮುಂಬೈಗೆ ಹೋಗಿದ್ದನು ಎಂದು ಮಹೇಶ್ ಗಾಣಿಗ ತನಿಖೆ ವೇಳೆ ತಿಳಿಸಿದ್ದನು.
ಆರೋಪಿಗಳ ಪತ್ತೆಗಾಗಿ ಮಹಾರಾಷ್ಟ್ರಕ್ಕೆ ತೆರಳಿದ ಪೊಲೀಸ್ ತಂಡ ಮಾ.8 ರಂದು ಮಹಾರಾಷ್ಟ್ರ ರಾಜ್ಯದ ಧಾನು ರಸ್ತೆಯ ಪರ್ಲ್‌ಲೈನ್ ಬೀಚ್ ರೆಸಾರ್ಟ್ ಬಳಿ ಕಿಶನ್ ಹೆಗ್ಡೆ, ರಮೇಶ್ ಪೂಜಾರಿ, ಮೋಹನ್‌ಚಂದ್ರ, ನಾಗರಾಜ್ ಬಂಧಿಸಿತು ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಎಸ್ಪಿ ಲಕ್ಷ್ಮಣ್ ನಿಂಬರಗಿ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಂತೆ ಕಾರ್ಕಳ ಎಎಸ್ಪಿ ಋಷಿಕೇಶ್ ಸೋನವಣೆ ಸೂಚನೆಯಂತೆ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್, ಎಸ್ಸೈ ಸತೀಶ್ ಎಂ.ಪಿ., ಎಎಸ್ಸೈ ರವಿ, ಸಿಬ್ಬಂದಿಗಳಾದ ಸುರೇಶ್, ಸಂತೋಷ್, ರಾಮು ಹೆಗ್ಡೆ, ವಿಲ್ಫ್ರೇಡ್ ಡಿಸೋಜ, ರವಿ ಕುಮಾರ್, ಸುಧಾಕರ, ರಾಜೇಶ್, ಪ್ರವೀಣ್, ಸಂದೀಪ್, ಶರಣಪ್ಪ, ಹರೀಶ್ ಬಾಬು, ಶಿವಾನಂದ, ನಿತಿನ್ ರಾವ್, ದಿನೇಶ್, ರಾಘವೇಂದ್ರ ಜೋಗಿ, ಜಗದೀಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.
ಮೂವರು ಆರೋಪಿಗಳು ರೌಡಿಶೀಟರ್
ರೌಡಿ ಶೀಟರ್ ಕಿಶನ್ ಹೆಗ್ಡೆ ಪಡುಬಿದ್ರೆ ಠಾಣೆಯಲ್ಲಿ ಕೊಲೆಯತ್ನ, ಮಣಿಪಾಲ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆ ಪ್ರಕರಣದಲ್ಲಿ ಮತ್ತು ಬೆಂಗಳೂರಿನ ಬಾಣಸವಾಡಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. ಸದ್ಯ ಆತ ವಾಂಟೆಂಡ್ ಆರೋಪಿಯಾಗಿದ್ದಾನೆ.
ರೌಡಿ ಶೀಟರ್ ರಮೇಶ್ ಪೂಜಾರಿ ವಿರುದ್ಧ ಶಿರ್ವ ಮತ್ತು ಕಾಪು ಠಾಣೆ ಯಲ್ಲಿ ತಲಾ ಒಂದು, ಬ್ರಹ್ಮಾವರ ಮತ್ತು ಮಣಿಪಾಲ ಠಾಣೆಯಲ್ಲಿ ತಲಾ ಎರಡು, ಉಡುಪಿ ನಗರ ಠಾಣೆಯಲ್ಲಿ 9 ದರೋಡೆ ಪ್ರಕರಣ, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಮಹೇಶ್ ಗಾಣಿಗ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಹಾಗೂ ರೌಡಿ ಶೀಟರ್ ಮೋಹನ್‌ಚಂದ್ರ ಶೆಟ್ಟಿ ವಿರುದ್ಧ ದೊಂಬಿ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ. ನಾಗರಾಜ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.