×
Ad

ತೀವ್ರ ನಗರೀಕರಣದಿಂದ ಮೂಲ ಸೌಕರ್ಯದಲ್ಲಿ ಕೊರತೆ: ಸಚಿವ ಖಂಡ್ರೆ

Update: 2018-03-09 21:02 IST

ಕಾಪು, ಮಾ.9: ತೀವ್ರಗತಿಯಲ್ಲಿ ನಡೆದಿರುವ ನಗರೀಕರಣದಿಂದ ನಗರಗಳ ಮೂಲಭೂತ ಸೌಕರ್ಯಗಳಲ್ಲಿ ಕೊರತೆಗಳು ಕಂಡುಬರುತ್ತಿವೆ. ಇದರಿಂದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ರಸ್ತೆ ಸೌಕರ್ಯ, ಬೀದಿ ದೀಪ ವ್ಯವಸ್ಥೆಗಳು ಅಸಮರ್ಪಕವಾಗುತ್ತಿದೆ. ಇದರಿಂದ ನಗರಗಳಲ್ಲಿ ಕೊಳಚೆ, ಕೊಂಪೆಗಳು ಹುಟ್ಟಿಕೊಳ್ಳುತ್ತಿವೆ ಎಂದು ರಾಜ್ಯ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಕಾಪುವಿನ ವೀರದ್ರ ದೇವಸ್ಥಾನದ ವೀರಭದ್ರ ಸಭಾಭವನದಲ್ಲಿ ಆಯೋಜಿಸ ಲಾದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

2011ರಲ್ಲಿಶೇ.38.57ರಷ್ಟಿದ್ದ ನಗರ ವಲಸೆ ಪ್ರಮಾಣ, ಈಗ ಶೇ.41ಕ್ಕೇರಿದೆ. 2026ರಲ್ಲಿ ಇದು ಶೇ.50ನ್ನು ದಾಟುವ ನಿರೀಕ್ಷೆ ಇದೆ. ಇದಕ್ಕೆ ಯೋಜನಾ ಬದ್ಧವಾದ ನಗರ ನಿರ್ಮಾಣದ ಮೂಲಕ ಕಾಯಕಲ್ಪ ನೀಡಬೇಕಾಗಿದೆ ಎಂದು ಈಶ್ವರ ಖಂಡ್ರೆ ನುಡಿದರು. ಇದಕ್ಕಾಗಿ ನಗರ ಸ್ಥಳೀಯಸಂಸ್ಥೆಗಳಿಗೆ ನೀಡುವ ಅನುದಾನದ ಪ್ರಮಾಣವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಈ ಬಾರಿಯ ಬಜೆಟ್‌ನಲ್ಲಿ 2000 ಕೋಟಿ ರೂ.ಗಳ ಅನುದಾನವನ್ನು 3,500 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದಾರೆ. ಇದರಿಂದ ಕುಡಿಯುವ ನೀರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.

ಈಗ ಹೊಸ ಪುರಸಭೆಗಳಿಗೆ 10 ಕೋಟಿ ರೂ. ಹಾಗೂ ಹಳೆ ಪುರಸಭೆಗೆ 2.5 ಕೋಟಿ ರೂ.ಅನುದಾನ ನೀಡಲಾಗುತ್ತಿದೆ. ಅದೇ ರೀತಿ ಮೊದಲ ದರ್ಜೆ ನಗರಸಭೆಗಳಿಗೆ 35 ಕೋಟಿ ಹಾಗೂ ಎರಡನೇ ದರ್ಜೆಗೆ 25 ಕೋಟಿ ರೂ.ಅನುದಾನ ನೀಡಲಾಗುತ್ತಿದೆ ಎಂದರು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಗರೋತ್ಧಾನ 3ರಲ್ಲಿ ಮಂಜೂರಾಗಿ ರುವ ಕಾಮಗಾರಿಗಳಿಗೆ ಇದೇ ಮಾ.20ರೊಳಗೆ ಚಾಲನೆ ನೀಡುವಂತೆ ತಿಳಿಸಲಾಗಿದೆ. ಇದೇ ನಗರೋತ್ಧಾನ 3ರಲ್ಲಿ ಇಂದು ಕಾಪು ಪುರಸಭಾ ವ್ಯಾಪ್ತಿ ಯಲ್ಲಿ ಒಟ್ಟು 8.5 ಕೋಟಿ ರೂ.ವೆಚ್ಚದಲ್ಲಿ ಒಟ್ಟು 16 ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆಗೆ ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ. 2040ರವರೆಗಿನ ದೂರದೃಷ್ಟಿಯನ್ನಿರಿಸಿ ರೂಪಿಸಲಾಗಿರುವ ಈ ಯೋಜನೆಯಿಂದ ಕಾಪು ವ್ಯಾಪ್ತಿಯ ಜನತೆ ಇನ್ನೊಂದು ವರ್ಷದೊಳಗೆ ಪ್ರತಿದಿನ ತಲಾ 135 ಲೀ.ಗಳಷ್ಟು ಕನಿಷ್ಠ ಕುಡಿಯುವ ನೀರು ಪಡೆಯಲಿದ್ದಾರೆ ಎಂದರು. ರಾಜ್ಯದಲ್ಲಿ ಒಟ್ಟು 270 ನಗರ ಸ್ಥಳೀಯ ಸಂಸ್ಥೆಗಳು (10 ಮಹಾನಗರ ಆಪಾಲಿಕೆ, 260 ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ) ತಮ್ಮ ಇಲಾಖಾ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಖಾಲಿ ಇರುವ ಸುಮಾರು 3000 ಹುದ್ದೆಗಳನ್ನು ತುಂಬುವಂತೆ ಕೆಪಿಎಸ್‌ಸಿಗೆ ತಿಳಿಸಲಾಗಿದೆ. ಸುಗಮ ಆಡಳಿತಕ್ಕಾಗಿ ಆಡಳಿತದ ವಿಕೇಂದ್ರೀಕರಣ ಮಾಡಿದ್ದು ಈಗ 5 ಕೋಟಿ ರೂ.ವರೆಗಿನ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮಟ್ಟದಲ್ಲೇ ನಿರ್ವಹಿಸಬಹು ದಾಗಿದೆ. ಹಲವು ನಿಯಮಾವಳಿಯನ್ನು ಸುಲಭೀಕರಿಸಿದ್ದು, ತಂತ್ರಾಂಶಗಳನ್ನೂ ಸರಳೀಕರಿಸಿ ಜನರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದರು.

ಒಂದು ಲಕ್ಷ ಜನಸಂಖ್ಯೆಗಿಂತ ಕಡಿಮೆ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ದೇವನಹಳ್ಳಿಯಲ್ಲಿ ಯಶಸ್ವಿಯಾದ ಹೊಸ ತಂತ್ರಜ್ಞಾನ ವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಗರದಲ್ಲಿ ಅನಧಿಕೃತವಾದ ಬಡಾವಣೆ ತಲೆ ಎತ್ತದಂತೆ, ಯೋಜನಾಬದ್ಧವಾದ ನಗರ ಬೆಳೆಯುವಂತೆ ವಿವಿಧ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯಕುಮಾರ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಪುವಿನಲ್ಲಿ ಇಂದು ನಗರೋತ್ಥಾನ 3ರಡಿ ಒಟ್ಟು 8.5 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶಾಸಕ ನಾಗಿ ತಾನು ಕಾಪು ಕ್ಷೇತ್ರದ ಅಭಿವೃದ್ಧಿಗೆ 130 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿದ್ದಾಗಿ ತಿಳಿಸಿದರು.

ಕಾಪುವಿನಲ್ಲಿ ಐದು ಸ್ಮಶಾನಗಳ ಅಭಿವೃದ್ಧಿ, 8 ಕೆರೆಗಳ ಅಭಿವೃದ್ಧಿ, ಎರಡು ಸೇತುವೆಗಳಿಗೆ ಶಿಲಾನ್ಯಾಸ, 500 ಮನೆಗಳ ಫ್ಲಾಟ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಕಾಪು ಪುರಸಭೆ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವೆಂದರು. ಇತ್ತೀಚೆಗೆ ಒಳಚರಂಡಿ ಕಾಮಗಾರಿಯಲ್ಲಿ ನಿರತರಾಗಿದ್ದ ಇಬ್ಬರು ಕಾರ್ಮಿಕರ ಮೇಲೆ ಅಕಸ್ಮಿಕವಾಗಿ ಮಣ್ಣು ಕುಸಿದು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಗಳಿಗೆ ಎಂಟು ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದು ಸೊರಕೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ಹಾಗೂ ಮಂಜೂರಾತಿ ಪತ್ರಗಳನ್ನು ಈಶ್ವರ ಖಂಡ್ರೆ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ, ಸದಸ್ಯರಾದ ಶಾಂತಲತಾ ಶೆಟ್ಟಿ, ಅರುಣ ಕುಮಾರ್ ಶೆಟ್ಟಿ, ವಿವಿಧ ಗ್ರಾಪಂಗಳ ಅಧ್ಯಕ್ಷರು, ಗ್ರಾಪಂಗಳ ಒಕ್ಕೂಟದ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಉಪಸ್ಥಿತ ರಿದ್ದರು.

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅ.2ರೊಳಗೆ ಬಯಲು ಬಹಿರ್ದೆಸೆ ಮುಕ್ತ
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ  ಮುಕ್ತಗೊಳಿಸುವ ಸಂಕಲ್ಪವನ್ನು ಇಲಾಖೆ ಮಾಡಿದ್ದು, ಈ ಗುರಿ ಸಾಧಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ. 

ಇದೇ ಅ.2ರ ಗಾಂಧಿ ಜಯಂತಿಯ ದಿನದೊಳಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬರ್ಹಿದೆಸೆ ಮುಕ್ತವೆಂದು ಘೋಷಿಸುವ ಸಂಕಲ್ಪ ಮಾಡಲಾಗಿದೆ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News