×
Ad

ಪರಿಸರ ನಾಶದಿಂದ ಕುಶಲಕರ್ಮಿಗಳ ವೃತ್ತಿ ಅಪಾಯದಲ್ಲಿ: ಸಿಡಬ್ಲ್ಯೂಸಿಯ ಶಿವಾನಂದ ಶೆಟ್ಟಿ

Update: 2018-03-09 21:10 IST

ಮಣಿಪಾಲ, ಮಾ.9: ಇಂದು ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದೆ. ಇದು ಗ್ರಾಮೀಣ ಪ್ರದೇಶದಲ್ಲಿರುವ ಕುಶಲಕರ್ಮಿಗಳು ಹಾಗೂ ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಣ್ಣಿನ ಮಲಿನದಿಂದ ಆವೆಮಣ್ಣಿನ ಕೊರತೆ, ಬಳ್ಳಿ ಗಿಡಗಳ ನಾಶದಿಂದ ಬುಟ್ಟಿ ತಯಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ಸ್ (ಸಿಡಬ್ಲ್ಯೂಸಿ) ಸಂಸ್ಥೆಯ ಸಹಾಯಕ ನಿರ್ದೇಶಕ ಟಿ.ಶಿವಾನಂದ ಶೆಟ್ಟಿ ಹೇಳಿದ್ದಾರೆ. 

ಮಣಿಪಾಲದ ಸ್ಕೂಲ್ ಆಫ್ ಕಮ್ಯೂನಿಕೇಷನ್(ಎಸ್‌ಒಸಿ) ಆತಿಥ್ಯದಲ್ಲಿ ಸಿಡಬ್ಲ್ಯೂಸಿ ಸಂಘಟನೆಯ ಸಹಭಾಗಿತ್ವದಲ್ಲಿ ಎಸ್‌ಒಸಿಯಲ್ಲಿ ಶುಕ್ರವಾರ ನಡೆದ 15ನೆ ವರ್ಷದ ವಾರ್ಷಿಕ ಮೇಳ ‘ನಮ್ಮ ಅಂಗಡಿ’ಯ ಉದ್ಘಾಟನಾ ಸಮಾ ರಂದಲ್ಲಿ ಅವರು ಮಾತನಾಡುತಿದ್ದರು.

ಇಂದು ಸಮಾಜದಲ್ಲಿ ಶ್ರಮಿಕ ವರ್ಗವೇ ಇಲ್ಲವಾಗಿದೆ. ಕುಶಲಕರ್ಮಿಗಳನ್ನು ಗುರುತಿಸುವ ಬದಲು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಅವರ ಮಕ್ಕಳು ಕೂಡ ಈ ವೃತ್ತಿಯಿಂದ ದೂರ ಉಳಿಯುತ್ತಿದ್ದಾರೆ ಎಂದ ಅವರು, ಕರಕುಶಲ ಉತ್ಪನ್ನ ಗಳಿಗೆ ಇಂದು ಮಾರುಕಟ್ಟೆ ದೊಡ್ಡ ಸಮಸ್ಯೆಯಾಗಿದೆ ಎಂದರು.

ಹಳ್ಳಿಗಳಲ್ಲಿ ಉದ್ಯೋಗ ಸೃಷ್ಠಿಯಾದರೆ ಮಾತ್ರ ಈ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಕುಶಲಕರ್ಮಿಗಳನ್ನು ಗುರುತಿಸುವ ಕೆಲಸ ಮಾಡಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಿ ತಮ್ಮ ವೃತ್ತಿಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮೇಳವನ್ನು ಉದ್ಘಾಟಿಸಿದ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಕುಶಲಕರ್ಮಿಗಳ ಕೌಶಲ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಎಸ್‌ಓಸಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯ ವನ್ನು ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಇಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ವೃತ್ತಿಗಳಿಂದ ಅದನ್ನು ನಿವಾರಿಸಬಹು ದಾಗಿದೆ ಎಂದು ತಿಳಿಸಿದರು.

ಎಸ್‌ಒಸಿ ನಿರ್ದೇಶಕಿ ಡಾ.ಪದ್ಮರಾಣಿ, ಸಂಯೋಜಕಿ ಮಂಜುಳಾ ವಿ. ಉಪಸ್ಥಿತರಿದ್ದರು. ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಕೆ. ಪದ್ಮ ಕುಮಾರ್ ಸ್ವಾಗತಿಸಿದರು. ಯೋಜನಾ ವ್ಯವಸ್ಥಾಪಕಿ ಸುಪ್ರಜಾ ಪ್ರದೀಪ್ ವಂದಿಸಿದರು. ಸಂಗೀತ ಕಾರ್ಯಕ್ರಮ ನಿರೂಪಿಸಿದರು.

ಮೂರು ದಿನಗಳ ಕಾಲ ನಡೆಯುವ ನಮ್ಮ ಅಂಗಡಿ ಮೇಳದಲ್ಲಿ ಸ್ಥಳೀಯ ಕಲೆಗಾರಿಕೆಯನ್ನು ಬಿಂಬಿಸುವ ಸಾವಯವ ಮೂಲದಿಂದ ತಯಾರಿಸಲ್ಪಟ್ಟ ವಿವಿಧ ಪ್ರಾಕೃತಿಕ ಉತ್ಪನ್ನಗಳಾದ ಜೇನುತುಪ್ಪ, ಉಪ್ಪಿನಕಾಯಿ, ಅಕ್ಕಿ, ಲಾವಂಚದ ಉತ್ಪನ್ನಗಳು, ಉಡುಪುಗಳು, ಮರದ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಹಾಗು ಕರಕುಶಲ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News