×
Ad

ಭೂ ಒತ್ತುವರಿ ವಿಶೇಷ ನ್ಯಾಯಾಲಯದಿಂದ ಉಡುಪಿ ಜಿಲ್ಲಾಧಿಕಾರಿಗೆ ಬಂಧನ ವಾರೆಂಟ್

Update: 2018-03-09 22:12 IST

ಉಡುಪಿ, ಮಾ.9: ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆಯಡಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಭೂ ಒತ್ತುವರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಬಂಧನ ವಾರೆಂಟ್ ಜಾರಿ ಮಾಡಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೆರೆ ಸೇರಿದಂತೆ ಸಾವಿರಾರು ಎಕರೆ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಡಳಿತ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಮತ್ತು ವಿಶೇಷ ನ್ಯಾಯಾಲಯ ಜಾರಿ ಮಾಡಿದ ಯಾವುದೇ ನೋಟೀಸ್‌ಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಈ ವಾರೆಂಟ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮಾ.8ರಂದು ನ್ಯಾಯಾಲಯವು ಮಂಗಳೂರು ಪಶ್ಚಿಮ ವಲಯ ಐಜಿಪಿಗೆ ಜಿಲ್ಲಾಧಿಕಾರಿಯ ಬಂಧನಕ್ಕೆ ವಾರೆಂಟ್ ಜಾರಿ ಮಾಡಿದ್ದು, ಇಂದು ಐಜಿಪಿ ಕಚೇರಿಯಿಂದ ಬಂಧನದ ವಾರೆಂಟ್ ನೋಟೀಸು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಬಂದಿದೆ ಎನ್ನಲಾಗಿದೆ.

ಈ ವಾರೆಂಟ್ ಜಾಮೀನು ಸಹಿತವಾಗಿದ್ದು, ಜಿಲ್ಲಾಧಿಕಾರಿಗಳು 10 ಸಾವಿರ ರೂ. ಬಾಂಡ್ ಹಾಗೂ ಒಬ್ಬ ವ್ಯಕ್ತಿಯ ಶ್ಯೂರಿಟಿ ನೀಡಬೇಕು ಮತ್ತು ಮಾ.13ಕ್ಕೆ ಕಡ್ಡಾಯವಾಗಿ ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾ.13ಕ್ಕೆ ಕೋರ್ಟ್‌ಗೆ ಹಾಜರು: ಡಿಸಿ
ಜಿಲ್ಲೆಯಲ್ಲಿ ಭೂ ಒತ್ತುವರಿ ಕುರಿತ ಮಾಹಿತಿಯನ್ನು ನೀಡಿಲ್ಲ ಎಂಬ ಕಾರಣಕ್ಕೆ ವಿಶೇಷ ನ್ಯಾಯಾಲಯವು ಜಾಮೀನು ಸಹಿತವಾದ ಬಂಧನ ವಾರೆಂಟ್ ಜಾರಿ ಮಾಡಿದ್ದು, ಮಾ.13ರಂದು ಖುದ್ಧಾಗಿ ನಾನು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪತ್ರಿಕೆಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದಿರುವ ಭೂ ಒತ್ತುವರಿ ಬಗ್ಗೆ ಮಾಹಿತಿ ನೀಡುವಂತೆ ಆಯಾ ತಾಲೂಕಿನ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದೆ. ಆದರೆ ಅವರು ಯಾರು ಕೂಡ ಮಾಹಿತಿ ನೀಡಿಲ್ಲ. ಈಗ ನನಗೆ ದಸ್ತಗಿರಿ ವಾರೆಂಟ್ ಜಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News