ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಕಾರ್ಮಿಕರಿಗೆ ಅನ್ಯಾಯ ಖಂಡಿಸಿ ತುರವೇ ಪ್ರತಿಭಟನೆ
ಮಂಗಳೂರು, ಮಾ.10: ನಗರದ ಬಾವುಟಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ ಮೆನೆರೋವಾ ಪ್ರೈ.ಲಿ. ಕಟ್ಟಡ ನಿರ್ಮಾಣ ಸಂಸ್ಥೆಯ ಯೋಜನೆಯಾದ ಅಲೆಕ್ಷಾಂಡ್ರಿಯಾ ಮಹಡಿ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ವೇತನ ಕೊಡದೆ ಸತಾಯಿಸಲಾಗುತ್ತಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಸೂಕ್ತ ಕ್ರಮ ಜರಗಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯು ಶನಿವಾರ ವಸತಿ ಸಮುಚ್ಚಯದ ಮುಂದೆ ಪ್ರತಿಭಟನೆ ನಡೆಸಿತು.
ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪುಮಾತನಾಡಿ ಇದರಲ್ಲಿ ರಾಜ್ಯವಲ್ಲದೆ ಹೊರರಾಜ್ಯದ ಕಾರ್ಮಿಕರೂ ಬೆವರು ಸುರಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡದೆ ವಂಚಿಸಲಾಗಿದೆ. ಇದನ್ನು ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ತುರವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾಧ್ಯಕ್ಷ ರಮೇಶ್ ಪೂಜಾರಿ ಶೀರೂರು, ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಎಂ.ಸಿರಾಜ್ ಅಡ್ಕರೆ, ಕಾಸರಗೋಡು ಜಿಲ್ಲಾಧ್ಯಕ್ಷ ಭಾಸ್ಕರ್ ಕುಂಬ್ಳೆ, ತುರವೇ ಕಾರ್ಮಿಕ ಮುಖಂಡರಾದ ಅನಿಲ್ ಪೂಜಾರಿ, ಶೇಖ್ ಮತೀನ್, ಗುರುಚೇತನ್, ಅಜಯ್ ಮತ್ತಿತರರಿದ್ದರು.