ಅಂಜುಮನ್ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಶಿಬಿರ ಸಮಾರೋಪ
ಭಟ್ಕಳ, ಮಾ. 10: ಇಲ್ಲಿನ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್. ಘಟಕದ ವತಿಯಿಂದ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧೀನಗರದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಎನ್. ಎಸ್. ಎಸ್. ಕ್ಯಾಂಪ್ ಮುಕ್ತಾಯ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ನಾಯ್ಕ ಶಿಬಿರಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು, ಗುರು ಹಿರಿಯರನ್ನು ಗೌರವದಿಂದ ಕಾಣಬೇಕೆಂದು ಕಿವಿಮಾತು ಹೇಳಿದರು. ನಾಯಿಯನ್ನು ತಂದು ಮನೆಯಲ್ಲಿ ಸಾಕುವ ನಾವು ನಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಡುವಷ್ಟು ಕಟುಕರಾಗುತ್ತಿರುವುದನ್ನು ಮನಮಿಡಿಯುವಂತೆ ಬಣ್ಣಿಸಿದ ಅವರು ದೀನ ದಲಿತರನ್ನು, ಅಸಹಾಯಕರನ್ನು, ಕಷ್ಟದಲ್ಲಿರುವವರನ್ನು ಕಡೆಗಣಿಸದೆ, ಅವರಿಗೆ ಪ್ರೀತಿ ತೋರಿ ಸಹಕಾರ ನೀಡುಂತೆ ವಿದ್ಯಾರ್ಥಿಗಳನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಾಹೀಲ್ ಮುಜಾವರ್ ಮಾತನಾಡಿ ಸ್ವಚ್ಚತೆ ಎಂಬುದು ನಮ್ಮ ನಮ್ಮ ಮನೆ, ಶಾಲೆಗಳಿಂದಲೇ ಆರಂಭವಾಗ ಬೇಕು. ಫೆಸ್‌ಬುಕ್, ವಾಟ್ಸಪ್, ಇಂಟರ್ನೆಟ್‌ಗಳ ಹಾವಳಿಯಲ್ಲಿ ನಮ್ಮ ಯುವಜನರ ಕ್ರಿಯಾಶೀಲತೆ ಕಳೆದು ಹೋಗುತ್ತಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ಯುವ ಜನತೆ ರಾಷ್ಟ್ರ ಕಟ್ಟುವ ಕೆಲಸ ವಾಡಬೇಕು ಎಂದು ಕರೆ ಕೊಟ್ಟರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಮಂಜುನಾಥ ಪ್ರಭು ಸ್ವಚ್ಚತೆ, ಸ್ವಾಸ್ಥ್ಯತೆ ಮತ್ತು ಮತದಾನದ ಮಹತ್ವದ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಿದ ತಮ್ಮ ಶಿಬಿರಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು. ಕಾಲೇಜ್ ಬೋರ್ಡ್ ಕಾರ್ಯದರ್ಶಿ ಜಾವೇದ್ ಅರ್ಮಾರ್ ಸಾಹೇಬ್ ವೇದಿಕೆಯಲ್ಲಿ ಉಪಸ್ತಿತರಿದ್ದರು. ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿ ಹರೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.