×
Ad

ಹೆಣ್ಮಕ್ಕಳಿಗೆ ಧಾರ್ಮಿಕ-ಲೌಕಿಕ ಶಿಕ್ಷಣ ಅಗತ್ಯ: ಸಚಿವ ಖಾದರ್‌

Update: 2018-03-10 20:52 IST

ಮಂಗಳೂರು, ಮಾ. 9: ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣದ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ‘ಸಿರಾತ್ ಅಕಾಡೆಮಿ ಫಾರ್ ಗರ್ಲ್ಸ್’ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂವರು ಮಹಿಳೆಯರಾದ ಆಸಿಯಾ ಜುವೇರಿಯಾ, ಖತೀಜಾ ಸುನೈರಾ ಮತ್ತು ಮರಿಯಂ ಮಲಿಕಾ ಅವರಿಂದ ನಗರದ ಪಾಂಡೇಶ್ವರದಲ್ಲಿ ಪ್ರಾರಂಭಿಸ ಲಾದ ಹೆಣ್ಣು ಮಕ್ಕಳ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆ ‘ಸಿರಾತ್’ ಯಶಸ್ಸು ಕಾಣಲಿ. ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುವ ಹೆಣ್ಣು ಮಕ್ಕಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.

ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ನೀಡುವ ದೊಡ್ಡ ಕೊಡುಗೆಯೇ ವಿದ್ಯಾಭ್ಯಾಸ. ಅದರಲ್ಲೂ ಲೌಕಿಕ ವಿದ್ಯಾಭ್ಯಾಸದ ಜತೆಗೆ ಧಾರ್ಮಿಕ ವಿದ್ಯಾಭ್ಯಾಸ ನೀಡುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಪರಲೋಕದ ಯಶಸ್ಸಿಗೆ ಪ್ರಯತ್ನಿಸುವುದಾಗಿದೆ. ಎರಡೂ ವಿದ್ಯಾಭ್ಯಾಸ ಹೊಂದಿದವರು ಹೆಚ್ಚಿನ ಜ್ಞಾನ ವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಮೂಲಕ ಸಾಮಾಜಿಕವಾಗಿ ಹೇಗೆ ವ್ಯವಹರಿಸಬೇಕು. ವರ್ತನೆ ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಖಾದರ್ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು, ವಿದ್ಯಾಭ್ಯಾಸ ಸಮುದಾಯದ ಆಸ್ತಿಯಾಗಿದೆ. ಸಮುದಾಯಕ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಕಾಳಜಿಯನ್ನು ವಹಿಸುವುದರಿಂದ ಸಮುದಾಯದ ಅಭಿವೃದ್ಧಿಯಾಗಿದೆ. ಜ್ಞಾನ ಹೊಂದಿದವನು ಮತ್ತು ಜ್ಞಾನ ಇಲ್ಲದವನು ಎಂದು ಎರಡು ವಿಭಾಗವಾಗಿ ವಿಂಗಡಿಸಲಾಗುತ್ತಿದೆ. ಆದರೆ, ಜ್ಞಾನ ಹೊಂದಿದವನೇ ಇಸ್ಲಾಮಿನಲ್ಲಿ ಶ್ರೇಷ್ಟ ವ್ಯಕ್ತಿ. ಆದ್ದರಿಂದ ಶಿಕ್ಷಣದ ಮಹತ್ವವನ್ನು ಅರಿತು ಸಮುದಾಯ ಈ ಬಗ್ಗೆ ಕಾರ್ಯಪ್ರವೃತ್ತವಾಗಬೇಕು ಎಂದು ಅವರು ಕರೆ ನೀಡಿದರು.

ಅಹ್ಲೆ ಸುನ್ನತ್ ವಲ್ ಜಮಾಅ್ ಅಧೀನದ ಈ ಶಿಕ್ಷಣ ಸಂಸ್ಥೆಯಲ್ಲಿ ಪ್ರೀಕೆಜಿಯಿಂದ 10ನೆ ತರಗತಿಯವರೆಗೆ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಲಭ್ಯವಿದೆ. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಎಜುಕೇಶನಲ್ ಇನ್ಸ್‌ಟಿಟ್ಯೂಶನ್ ಫೆಡರೇಶನ್ಸ್‌ನ ಅಧ್ಯಕ್ಷ ಮುಹಮ್ಮದ್ ಬ್ಯಾರಿ, ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿಯಾರ್, ಜಪ್ಪು ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಮದನಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಬಾವ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ಹಮೀದ್ ಗೋಳ್ತಮಜಲು ಸ್ವಾಗತಿಸಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News