ಶ್ರೀಲಂಕಾ: ಮುಸ್ಲಿಮ್ ವಿರೋಧಿ ದಾಳಿ ಖಂಡಿಸಿ ಬೌದ್ಧ ಬಿಕ್ಕುಗಳು, ಮಾನವಹಕ್ಕು ಕಾರ್ಯಕರ್ತರ ಧರಣಿ
ಕೊಲಂಬೊ, ಮಾ. 10: ಹೊಸದಾಗಿ ದಾಳಿಗಳು ನಡೆಯುವ ಭೀತಿಯ ನಡುವೆಯೇ, ಶ್ರೀಲಂಕಾದ ಮುಸ್ಲಿಮರು ದೇಶಾದ್ಯಂತ ಸೈನಿಕರ ರಕ್ಷಣೆಯಲ್ಲಿ ಶುಕ್ರವಾರದ ಪ್ರಾರ್ಥನೆ ನೆರವೇರಿಸಿದರು. ಆದಾಗ್ಯೂ, ಯಾವುದೇ ಅನಪೇಕ್ಷಿತ ಘಟನೆಗಳಿಲ್ಲದೆ ಶುಕ್ರವಾರದ ಪ್ರಾರ್ಥನೆ ಸಾಂಗವಾಗಿ ನೆರವೇರಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ, ಮುಸ್ಲಿಮ್ ವಿರೋಧಿ ದಾಳಿಗಳನ್ನು ಖಂಡಿಸಿ ನೂರಾರು ಬೌದ್ಧ ಬಿಕ್ಕುಗಳು ಮತ್ತು ಮಾನವಹಕ್ಕುಗಳ ಕಾರ್ಯಕರ್ತರು ಕೊಲಂಬೊದಲ್ಲಿ ಶುಕ್ರವಾರ ಧರಣಿ ನಡೆಸಿದರು. ಹಿಂಸೆಯನ್ನು ಪ್ರೇರೇಪಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಮುಸ್ಲಿಮ್ ವಿರೋಧಿ ಗಲಭೆಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶನಿವಾರ ಘೋಷಿಸಿದ್ದಾರೆ.
ಮನಮೋಹಕ ಪರ್ವತ ರಿಸಾರ್ಟ್ ಕ್ಯಾಂಡಿಯಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಮೂವರು ನಿವೃತ್ತ ನ್ಯಾಯಾಧೀಶರ ಸಮಿತಿಯೊಂದು ತನಿಖೆ ನಡೆಸುವುದು ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ನಾಲ್ಕು ದಿನಗಳ ಕಾಲ ಅವ್ಯಾಹತವಾಗಿ ನಡೆದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ. ಮುಸ್ಲಿಮರ ಒಡೆತನದ 200ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಭಾರೀ ಪ್ರಮಾಣದಲ್ಲಿ ಸೇನಾ ನಿಯೋಜನೆ ನಡೆಸಿದ ಬಳಿಕವಷ್ಟೇ ಹಿಂಸಾಚಾರವು ಗುರುವಾರ ತಹಬಂದಿಗೆ ಬಂದಿತ್ತು. ಗಲಭೆಯಲ್ಲಿ 11 ಮಸೀದಿಗಳು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ನಾಶಗೊಂಡಿವೆ. ದೇಶದಲ್ಲಿ ಹಿಂಸೆ ಸ್ಫೋಟಗೊಂಡ ಬೆನ್ನಿಗೇ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಶನಿವಾರ ಬೆಳಗ್ಗೆ ಕರ್ಫ್ಯೂವನ್ನು ಸಡಿಲಿಸಲಾಗಿತ್ತು.
ಆದರೆ, ಸೈನಿಕರು ಮತ್ತು ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹಿಂಸೆಯ ಪ್ರಧಾನ ರೂವಾರಿ ಸೇರಿದಂತೆ ಸುಮಾರು 150 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.