‘ವಿಫಲ ದೇಶ’ದಿಂದ ಭಾರತಕ್ಕೆ ಉಪದೇಶ ಬೇಕಾಗಿಲ್ಲ

Update: 2018-03-10 16:30 GMT

ವಿಶ್ವಸಂಸ್ಥೆ, ಮಾ. 10: ಜಿನೇವದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಸಭೆಯ ಎರಡನೆ ದಿನವಾದ ಶುಕ್ರವಾರವೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.

 ಪಾಕಿಸ್ತಾನವು ‘ವಿಫಲ ದೇಶ’ವಾಗಿದ್ದು, ಅಲ್ಲಿ ಭಯೋತ್ಪಾದಕರು ವಿಜೃಂಭಿಸುತ್ತಿದ್ದಾರೆ ಹಾಗೂ ಭಯೋತ್ಪಾದಕ ಉಸಾಮ ಬಿನ್ ಲಾದನ್ ಆಶ್ರಯ ಪಡೆದಿದ್ದನು ಎಂದು ಭಾರತ ಹೇಳಿದೆ ಹಾಗೂ ಮುಂಬೈ, ಪಠಾಣ್‌ಕೋಟ್ ಮತ್ತು ಉರಿ ದಾಳಿಗಳಲ್ಲಿ ಶಾಮೀಲಾದವರನ್ನು ಶಿಕ್ಷಿಸುವಂತೆ ಆ ದೇಶವನ್ನು ಒತ್ತಾಯಿಸಿದೆ.

‘‘ಪಾಕಿಸ್ತಾನದಲ್ಲಿ ಭಯೋತ್ಪಾದಕರು ವಿಜೃಂಭಿಸುತ್ತಿದ್ದು, ಅಲ್ಲಿನ ಬೀದಿಗಳಲ್ಲಿ ಯಾವುದೇ ಹೆದರಿಕೆಯಿಲ್ಲದೆ ಓಡಾಡುತ್ತಿರುವಾಗ, ಭಾರತದಲ್ಲಿ ಮಾನವಹಕ್ಕು ರಕ್ಷಣೆ ಬಗ್ಗೆ ಅದು ಪಾಠ ಮಾಡುತ್ತಿರುವುದನ್ನು ನಾವು ಕೇಳುತ್ತಿದ್ದೇವೆ’’ ಎಂದು ಜಿನೇವದಲ್ಲಿರುವ ಭಾರತೀಯ ವಿಶ್ವಸಂಸ್ಥೆ ನಿಯೋಗದ ದ್ವಿತೀಯ ಕಾರ್ಯದರ್ಶಿ ಮಿನಿ ದೇವಿ ಕುಮಮ್ ಹೇಳಿದರು.

‘‘2008ರ ಮುಂಬೈ ಭಯೋತ್ಪಾದಕ ದಾಳಿ ಹಾಗೂ 2016ರ ಪಠಾಣ್‌ಕೋಟ್ ಮತ್ತು ಉರಿ ದಾಳಿಗಳಲ್ಲಿ ಶಾಮೀಲಾದ ಭಯೋತ್ಪಾದಕರನ್ನು ಶಿಕ್ಷಿಸಲು ಪಾಕಿಸ್ತಾನ ಸರಕಾರ ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನೋಡಲು ನಾವು ಕಾಯುತ್ತಿದ್ದೇವೆ’’ ಎಂದರು.

‘‘ವಿಫಲ ದೇಶ ಎಂಬುದಾಗಿ ಬಣ್ಣಿಸಲ್ಪಟ್ಟಿರುವ ದೇಶವೊಂದರಿಂದ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳ ಬಗ್ಗೆ ಪಾಠ ಕೇಳಲು ಜಗತ್ತು ತಯಾರಿಲ್ಲ’’ ಎಂದು ಭಾರತೀಯ ಪ್ರತಿನಿಧಿ ಹೇಳಿದರು.

ಕಾಶ್ಮೀರದಲ್ಲಿ ಜನಮತಗಣನೆಗೆ ಒತ್ತಾಯಿಸಿದ ಪಾಕ್

ಇದಕ್ಕೂ ಮೊದಲು ಮಾತನಾಡಿದ ಜಿನೇವ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಉಪ ಖಾಯಂ ಪ್ರತಿನಿಧಿ ತಾಹಿರ್ ಅಂದ್ರಾಬಿ, ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕೆಂದು ಒತ್ತಾಯಿಸಿದರು.

 ‘‘ಕಾಶ್ಮೀರ ವಿವಾದದ ಕೇಂದ್ರದಲ್ಲಿ ಇರುವುದು ಸ್ವನಿರ್ಣಯದ ಹಕ್ಕು. ಇದನ್ನು ಜನಮತಗಣನೆ ಮೂಲಕ ನಿರ್ಧರಿಸಲು ಭಾರತದ ಪ್ರಥಮ ಪ್ರಧಾನಿ ಹಾಗೂ ಭಾರತದ ಸ್ಥಾಪಕರಲ್ಲಿ ಓರ್ವರಾಗಿರುವ ಜವಾಹರಲಾಲ್ ನೆಹರು ಒಪ್ಪಿಗೆ ನೀಡಿದ್ದರು ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ ಈ ಪ್ರಸ್ತಾಪಕ್ಕೆ ಅಂಗೀಕಾರ ನೀಡಿತ್ತು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News