ಮಾಜಿ ಸೈನಿಕರ ವಿಶ್ರಾಂತಿ ಗೃಹದ ಮೇಲೆ ದಾಳಿ: 3 ಮಹಿಳೆಯರ ಹತ್ಯೆ
ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಮಾ. 10: ಕ್ಯಾಲಿಫೋರ್ನಿಯದಲ್ಲಿರುವ ಮಾಜಿ ಸೈನಿಕರ ವಿಶ್ರಾಂತಿ ಗೃಹವೊಂದರಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಬಂದೂಕುಧಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಾಪ ವೈನ್ ಕಂಟ್ರಿಯ ಉತ್ತರದ ಯೋಂಟ್‌ವಿಲ್‌ನಲ್ಲಿರುವ 600 ಎಕರೆ ಗೃಹಕ್ಕೆ ಶುಕ್ರವಾರ ಪ್ರವೇಶಿಸಿದ ಬಂದೂಕುಧಾರಿ ಮೂವರು ಮಹಿಳೆಯರನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದನು ಹಾಗೂ ಒಂದು ಗಂಟೆಯ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
‘‘ಬಂದೂಕುಧಾರಿಯು ಮೂವರು ಮಹಿಳೆಯರನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದಾನೆನ್ನಲಾದ ಕೋಣೆಗೆ ಪೊಲೀಸರು ನುಗ್ಗಿದಾಗ ಓರ್ವ ಪುರುಷ ಮತ್ತು ಮೂವರು ಮಹಿಳೆಯರು ಮೃತಪಟ್ಟ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
1884ರಲ್ಲಿ ಸ್ಥಾಪನೆಯಾಗಿರುವ ಈ ಆಶ್ರಮದಲ್ಲಿ ಸುಮಾರು 1,000 ಮಾಜಿ ಸೈನಿಕರು ವಾಸಿಸುತ್ತಿದ್ದಾರೆ. ಇದು ಅಮೆರಿಕದಲ್ಲಿರುವ ಅತಿ ದೊಡ್ಡ ಸೈನಿಕ ವಿಶ್ರಾಂತಿ ಗೃಹವಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಎರಡನೆ ಮಹಾಯುದ್ಧ, ಕೊರಿಯ ಯುದ್ಧ, ವಿಯೆಟ್ನಾಮ್ ಯುದ್ಧ, ಡೆಸರ್ಟ್ ಸ್ಟಾರ್ಮ್ ಮತ್ತು ಇರಾಕ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಸೈನಿಕರು ಇಲ್ಲಿ ವಾಸಿಸುತ್ತಿದ್ದಾರೆ.
ಬಂದೂಕುಧಾರಿಯು ಅಲ್ಲೇ ಚಿಕಿತ್ಸೆ ಪಡೆದಿದ್ದ
ಬಂದೂಕುಧಾರಿಯು ಮಾಜಿ ಸೈನಿಕನಾಗಿದ್ದು, ಅದೇ ಆಶ್ರಮದಲ್ಲಿ ಮಾನಸಿಕ ಒತ್ತಡಕ್ಕಾಗಿ ಅಲ್ಲಿ ಚಿಕಿತ್ಸೆ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆತನನ್ನು 36 ವರ್ಷದ ಆಲ್ಬರ್ಟ್ ವೊಂಗ್ ಎಂದು ಗುರುತಿಸಲಾಗಿದೆ.
ಆತನನ್ನು ಎರಡು ವಾರಗಳ ಹಿಂದೆ ಆಶ್ರಮದಿಂದ ಬಿಡುಗಡೆ ಮಾಡಲಾಗಿತ್ತು.