ಫ್ಲೋರಿಡದಲ್ಲಿ ಬಂದೂಕು ನಿಯಂತ್ರಣ ಕಾನೂನು ಜಾರಿ

Update: 2018-03-10 16:50 GMT

ಮಯಾಮಿ (ಅವೆುರಿಕ), ಮಾ. 10: ಬಂದೂಕು ಖರೀದಿ ಪ್ರಕ್ರಿಯೆಯನ್ನು ಕಠಿಣಗೊಳಿಸುವ ಹಾಗೂ ಶಾಲೆಗಳ ಸಿಬ್ಬಂದಿಗೆ ಶಸ್ತ್ರಗಳನ್ನು ನೀಡುವ ಪ್ರಸ್ತಾಪಗಳನ್ನು ಹೊಂದಿರುವ ಮಸೂದೆಗೆ ಅಮೆರಿಕದ ಫ್ಲೋರಿಡ ರಾಜ್ಯದ ಗವರ್ನರ್ ರಿಕ್ ಸ್ಕಾಟ್ ಶುಕ್ರವಾರ ಸಹಿ ಹಾಕಿದ್ದಾರೆ. ಇದರೊಂದಿಗೆ ಅದು ಕಾನೂನಾಗಿ ಮಾರ್ಪಟ್ಟಿದೆ.

ಮೂರು ವಾರಗಳ ಭಾವನಾತ್ಮಕ ಚರ್ಚೆಯ ಬಳಿಕ ಮಸೂದೆಗೆ ಫ್ಲೋರಿಡ ಶಾಸನ ಸಭೆಯು ಬುಧವಾರ ಅಂಗೀಕಾರ ನೀಡಿತ್ತು.

ಈ ಕಾನೂನು ಬಂದೂಕು ಖರೀದಿಯ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುತ್ತದೆ ಹಾಗೂ ಸೆಮಿ ಆಟೊಮ್ಯಾಟಿಕ್ ಬಂದೂಕನ್ನು ಪೂರ್ಣ ಆಟೊಮ್ಯಾಟಿಕ್ ಆಗಿ ಪರಿವರ್ತಿಸುವ ಸಲಕರಣೆಗಳನ್ನು ನಿಷೇಧಿಸುತ್ತದೆ.

ಈ ಕಾನೂನಿಗೆ ಪ್ರಭಾವಿ ಲಾಬಿ ಗುಂಪು ‘ನ್ಯಾಶನಲ್ ರೈಫಲ್ ಅಸೋಸಿಯೇಶನ್’ ವಿರೋಧ ವ್ಯಕ್ತಪಡಿಸಿದೆ.

ಇತ್ತೀಚೆಗೆ ಫ್ಲೋರಿಡದ ಪಾರ್ಕ್‌ಲ್ಯಾಂಡ್‌ನಲ್ಲಿರುವ ಹೈಸ್ಕೂಲೊಂದರಲ್ಲಿ ನಡೆದ ಬಂದೂಕು ದಾಳಿಯ ಬಳಿಕ ದೇಶಾದ್ಯಂತ ಭುಗಿಲೆದ್ದ ಬಂದೂಕು ನಿಷೇಧ ಕೂಗಿನ ಹಿನ್ನೆಲೆಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಫೆಬ್ರವರಿ 14ರಂದು ನಡೆದ ಆ ದಾಳಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ಸೇರಿ 17 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News