ಪೂರ್ವ ಘೌಟದಲ್ಲಿ ಸೇನಾ ಕಾರ್ಯಾಚರಣೆ ತೀವ್ರ

Update: 2018-03-10 16:56 GMT

ಡಮಾಸ್ಕಸ್ (ಸಿರಿಯ), ಮಾ. 10: ಬಂಡುಕೋರ ನಿಯಂತ್ರಣದ ಪೂರ್ವ ಘೌಟದ ಮಧ್ಯ ಭಾಗದಲ್ಲಿ ನಡೆಸುತ್ತಿರುವ ತನ್ನ ಕಾರ್ಯಾಚರಣೆಗಳನ್ನು ಸಿರಿಯ ಸೇನೆ ತೀವ್ರಗೊಳಿಸಿದೆ ಎಂದು ಸರಕಾರಿ ಟೆಲಿವಿಶನ್ ಶನಿವಾರ ವರದಿ ಮಾಡಿದೆ.

ಸರಕಾರಿ ಸೇನೆಯು ಪೂರ್ವ ಘೌಟವನ್ನು ಇಬ್ಭಾಗಿಸುವ ಹಂತದಲ್ಲಿದೆ.

ಪೂರ್ವ ಘೌಟದ ಉತ್ತರಾರ್ಧ ಮತ್ತು ದಕ್ಷಿಣಾರ್ಧಗಳ ನಡುವಿನ ಕೊನೆಯ ಕೊಂಡಿಗಳಾಗಿರುವ ಮೆಸ್ರಬ ಮತ್ತು ಮುಡೈರ ಎಂಬ ಎರಡು ಸಣ್ಣ ಪಟ್ಟಣಗಳನ್ನು ಸರಕಾರಿ ಸೇನೆ ಸಮೀಪಿಸುತ್ತಿದೆ ಎಂದು ಸರಕಾರಿ ಟಿವಿ ಹೇಳಿದೆ.

ಅದೇ ವೇಳೆ, ಇತ್ತೀಚಿನ ದಿನಗಳಲ್ಲಿ ತಾವು ಪ್ರತಿದಾಳಿಗಳನ್ನು ನಡೆಸಿದ್ದು, ಕಳೆದುಕೊಂಡಿರುವ ಕೆಲವು ಭಾಗಗಳನ್ನು ಮರುವಶಪಡಿಸಿಕೊಂಡಿದ್ದೇವೆ ಎಂದು ಬಂಡುಕೋರ ಗುಂಪುಗಳು ಹೇಳಿವೆ.

ಡಮಾಸ್ಕಸ್ ಸಮೀಪದಲ್ಲಿ ಬಂಡುಕೋರರ ಕೊನೆಯ ಭದ್ರನೆಲೆಯಾಗಿರುವ ಪ್ರದೇಶವನ್ನು ಮರುವಶಪಡಿಸಿಕೊಳ್ಳಲು ಸಿರಿಯ ಸೇನೆಯು ಮೂರು ವಾರಗಳಿಂದ ಭೀಕರ ದಾಳಿಗಳನ್ನು ನಡೆಸುತ್ತಿದೆ. ಈ ಅವಧಿಯಲ್ಲಿ ಸುಮಾರು ಅರ್ಧದಷ್ಟು ಪ್ರದೇಶವನ್ನು ವಶಪಡಿಸಿಕೊಳ್ಳುವಲ್ಲಿ ಸರಕಾರಿ ಪಡೆಗಳು ಯಶಸ್ವಿಯಾಗಿವೆ ಹಾಗೂ ದಾಳಿಗಳಲ್ಲಿ 960 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಾತ್ರಿಯಿಡೀ ಯುದ್ಧವಿಮಾನಗಳ ದಾಳಿ

ಪೂರ್ವ ಘೌಟದಲ್ಲಿ ಶುಕ್ರವಾರ ರಾತ್ರಿಯಿಡೀ ಯುದ್ಧವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಫಿರಂಗಿಗಳ ಮೂಲಕ ದಾಳಿಗಳನ್ನು ನಡೆಸಲಾಗಿದೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News