ಆಮಿಷಗಳಿಗೆ ಒಳಗಾಗದೇ ಮಹಿಳೆಯರು ಮತ ಚಲಾಯಿಸಬೇಕು: ಡಿಸಿ ಪ್ರಿಯಾಂಕ
ಉಡುಪಿ, ಮಾ. 11 : ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳು, ಸೀರೆ, ಮಿಕ್ಸಿ, ಕುಕ್ಕರ್ ಮತ್ತಿತರ ದಿನ ಬಳಕೆಯ ವಸ್ತುಗಳನ್ನು ನೀಡುವುದರ ಮೂಲಕ ಆಮಿಷ ಒಡ್ಡಲಿದ್ದು, ಮಹಿಳೆಯರು ರಾಜಕೀಯ ಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗದೇ, ಮುಕ್ತ ಮತ್ತು ನಿರ್ಭಿತಿಯಿಂದ ತಮ್ಮ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ತಿಳಿಸಿದ್ದಾರೆ.
ಅವರು ರವಿವಾರ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರನ್ನ ಉದ್ದೇಶಿಸಿ ಮಾತನಾಡಿದರು.
ಮಹಿಳೆಯರಿಗೆ ಪ್ರಥಮವಾಗಿ ಸಮಾನತೆಯ ಹಕ್ಕು, ಮತದಾನದ ಮೂಲಕ ಬಂದಿದೆ. ಮಹಿಳೆಯರು ತಮಗೆ ದೊರೆತ ಈ ಹಕ್ಕನ್ನು ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳ ಆಮಿಷಗಳಿಗೆ ಬಲಿ ಕೊಡದೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕುರಿತಂತೆ ಸಮೀಪದ ಬಿ.ಎಲ್.ಒಗಳ ಬಳಿ ಪರಿಶೀಲಿಸಿ, ಪಟ್ಟಿಯಲ್ಲಿ ಹೆಸರು ಇಲ್ಲವಾದರೆ ಸೇರಿಸಲು ಅವಕಾಶವಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ಮತ ಚಲಾಯಿಸಿ. ತಾವು ಮತ ಚಲಾಯಿಸದೇ ಇದ್ದಲ್ಲಿ ಶೋಷಣೆ, ದೌರ್ಜನ್ಯ ಪ್ರಶ್ನಿಸುವ ಅವಕಾಶ ಕಳೆದುಕೊಳ್ಳುತ್ತೀರಿ, ಆದ್ದರಿಂದ ಯೋಗ್ಯ ವ್ಯಕ್ತಿಗೆ ಮತ ನೀಡಿ, ಪ್ರಜಾಪ್ರಭುತ್ವ ತಮಗೆ ನೀಡಿರುವ ಅಧಿಕಾರ ಚಲಾಯಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ನೈತಿಕ ಮತದಾನಕ್ಕೆ ಚುನಾವಣಾ ಆಯೋಗ ಹೆಚ್ಚಿನ ಒತ್ತು ನೀಡಿದ್ದು, ಪ್ರತಿಯೊಬ್ಬರೂ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ , ತಮ್ಮ ಮನಃಸಾಕ್ಷಿಗೆ ಯೋಗ್ಯ ಅನಿಸುವಂತಹ ವ್ಯಕ್ತಿಗೆ ಮತ ಚಲಾಯಿಸಿ, ಮನೆಯಲ್ಲಿ ಹಾಸಿಗೆ ಹಿಡಿದಿರುವ ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಸಹ ಮತ ಚಲಾವಣೆಗೆ ಅನುಕೂಲವಾಗುವಂತೆ ಜಿಲ್ಲಾಡಳಿತದಿಂದಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದ್ದು, ರಾಜಕೀಯ ಪಕ್ಷಗಳು ಕಳುಹಿಸುವ ವಾಹನಗಳನ್ನು ಬಳಸಬೇಡಿ, ಮತಗಟ್ಟೆಗಳಲ್ಲಿಯೂ ಸಹ ರೋಗಿಗಳಿಗೆ, ವೃದ್ಧರಿಗೆ ಮತ್ತು ವಿಕಲಚೇತನರಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಿಯಾಂಕ ಹೇಳಿದರು.
ಪಲ್ಸ್ ಪೋಲಿಯೋ ಉದ್ಘಾಟನೆ
ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಉಡುಪಿ ಮತ್ತು ಲಯನ್ಸ್ ಕ್ಲಬ್ ಉಡುಪಿ ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾಯಕ್ರಮದಲ್ಲಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಿ, ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ , ಆರ್.ಸಿ.ಎಚ್ ಅಧಿಕಾರಿ ಡಾ. ಎಂ.ಜಿ.ರಾಮ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯೆ ಡಾ. ಕಿಶೋರಿ, ಲಯನ್ಸ್ ಉಪ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ರೋಟರಿ ಅಧ್ಯಕ್ಷ ರಾಮಚಂದ್ರ ಉಪಾದ್ಯಾಯ, ಕಾರ್ಯದರ್ಶಿ ಕಾರಂತ್, ರೋಟರಿಯ ಲಸಿಕಾ ಉಸ್ತುವಾರಿ ಐ.ಕೆ. ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿ, ವಂದಿಸಿದರು.