ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಜು ಕವಿದ ವಾತಾವರಣ
ಮಂಗಳೂರು, ಮಾ. 11: ಅಬುಧಾಬಿ ಹಾಗೂ ಬೆಂಗಳೂರಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನಗಳು ಮಂಜು ಕವಿದ ವಾತಾವರಣದಿಂದಾಗಿ ಭೂಸ್ಪರ್ಶ ಮಾಡದೆ ಹಿಂದಿರುಗಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಅಬುಧಾಬಿ ಹಾಗೂ ಬೆಂಗಳೂರಿನಿಂದ ಹೊರಟ ಏರ್‌ಜೆಟ್‌ವೇಸ್ ವಿಮಾನಗಳು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ, ಬೆಳಗ್ಗೆಯಿಂದಲೇ ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಇಳಿಯಲು ಸಾಧ್ಯವಾಗದೆ ಬೆಂಗಳೂರಿಗೆ ಹೊರಟಿದೆ.
ಅಬುಧಾಬಿಯಿಂದ ಮಂಗಳೂರಿಗೆ ಬಂದ ಪ್ರಯಾಣಿಕರು ಹಾಗೂ ಬೆಂಗಳೂರಿನಿಂದ ತುರ್ತಾಗಿ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರು ತೊಂದರೆಯನ್ನು ಅನುಭವಿಸಬೇಕಾಯಿತು. ಮಂಗಳೂರಿಗೆ ಬರಬೇಕಾಗಿದ್ದ ಸ್ಪೈಸ್‌ಜೆಟ್ ವಿಮಾನಗಳು ಕೂಡ ಬೆಂಗಳೂರಿಗೆ ಹಿಂದಿರುಗಿವೆ.
ಸಚಿವರಿದ್ದ ವಿಮಾನ ವಿಳಂಬ
ಸಚಿವ ಯು.ಟಿ.ಖಾದರ್ ಅವರು ರವಿವಾರ ಬೆಳಗ್ಗೆ 7:10ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರು. ಅವರು ಬೆಳಗ್ಗೆ 8:10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬೇಕಾಗಿತ್ತು. ಆದರೆ, ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಇಳಿಯಲು ಸಾಧ್ಯವಾಗದೆ ಮತ್ತೆ ಬೆಂಗಳೂರಿಗೇ ಹಿಂದಿರುಗಿತು. ಸುಮಾರು 9 ಗಂಟೆಗೆ ಬೆಂಗಳೂರಿಗೆ ತಲುಪಿದ ಸಚಿವರು ಮತ್ತೆ ಜೆಟ್‌ಏರ್‌ವೇಸ್‌ನಲ್ಲಿ ಹೊರಟು 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದರು. ಇದರಿಂದಾಗಿ ಮಂಗಳೂರಿನಲ್ಲಿ ಸಚಿವರ ಬೆಳಗ್ಗಿನ ಕಾರ್ಯಕ್ರಮಗಳು ರದ್ದುಗೊಂಡವು.