ಎಸೆಸೆಲ್ಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 32,786 ವಿದ್ಯಾರ್ಥಿಗಳು
ಮಂಗಳೂರು, ಮಾ.11: 2017-18ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾ.23ರಂದು ರಾಜ್ಯಾದ್ಯಂತ ಪರೀಕ್ಷೆ ಆರಂಭಗೊಂಡು ಎ.6ಕ್ಕೆ ಮುಕ್ತಾಯಗೊಳ್ಳಲಿದೆ.
ಜಿಲ್ಲೆಯಲ್ಲಿ ಈ ವರ್ಷ ಪರೀಕ್ಷೆಗೆ 32,786 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅದರಲ್ಲಿ 17,364 ಬಾಲಕರು ಹಾಗೂ 15,422 ಬಾಲಕಿಯರು ಸೇರಿದ್ದಾರೆ. ಈ ಪೈಕಿ 28,966 ಶಾಲಾ ವಿದ್ಯಾರ್ಥಿಗಳು, 2,263 ಶಾಲಾ ಪುನರಾವರ್ತಿತ ಅಭ್ಯರ್ಥಿಗಳು, 1,215 ಖಾಸಗಿ ಅಭ್ಯರ್ಥಿಗಳು ಹಾಗೂ 342 ಖಾಸಗಿ ಪುನಾರವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 94 ಪರೀಕ್ಷಾ ಕೇಂದ್ರಗಳಿವೆ. ಅವುಗಳ ಪೈಕಿ ಬಂಟ್ವಾಳ 17, ಬೆಳ್ತಂಗಡಿ 13, ಮಂಗಳೂರು ಉತ್ತರ 21, ಮಂಗಳೂರು ದಕ್ಷಿಣ 20, ಮೂಡುಬಿದಿರೆ 4, ಪುತ್ತೂರು 12, ಸುಳ್ಯ 7 ಕೇಂದ್ರಗಳಿವೆ. ಖಾಸಗಿ ಅಭ್ಯರ್ಥಿಗಳಿಗೆ 4 ಪರೀಕ್ಷಾ ಕೇಂದ್ರಗಳು ಮಂಗಳೂರು ಉತ್ತರ ವ್ಯಾಪ್ತಿಯಲ್ಲಿದೆ. ಪರೀಕ್ಷಾ ಸಂದರ್ಭದಲ್ಲಿ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳ ಆಸುಪಾಸಿನಲ್ಲಿ ಜೆರಾಕ್ಸೃ್ ಕೇಂದ್ರಗಳನ್ನು ಮುಚ್ಚುವುದು ಸೇರಿದಂತೆ ಸಾರ್ವಜನಿಕರ ಮುಕ್ತ ಓಡಾಟಕ್ಕೆ ನಿರ್ಬಂಧಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
2018ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ಹಾಜರಾಗಲಿದ್ದು, ಇದಕ್ಕಾಗಿ ಎಲ್ಲಾ 7 ವಲಯಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಆಸನಗಳ ಲಭ್ಯತೆಯಿರುವ 94 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. 1,448 ಪರೀಕ್ಷಾ ಕೊಠಡಿಗಳು ಲಭ್ಯವಿರುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಪೂರ್ವಭಾವಿ ಸಭೆ ನಡೆದಿದೆ.
ವಿಚಕ್ಷಣ ಜಾಗೃತ ದಳ : ಜಿಲ್ಲೆಯ 7 ವಲಯಗಳ 94 ಪರೀಕ್ಷಾ ಕೇಂದ್ರಗಳ ಪರೀಕ್ಷಾ ಪ್ರಕ್ರಿಯೆ ವೀಕ್ಷಣೆಗೆ ಅಗತ್ಯವಿರುವಷ್ಟು ಜಿಲ್ಲಾ ಹಂತದ ವಿಚಕ್ಷಣಾ ದಳವನ್ನು ನೇಮಿಸಲಾಗಿದೆ. ಅಲ್ಲದೆ 94 ಮುಖ್ಯ ಅಧೀಕ್ಷಕರು, 31 ಉಪ ಮುಖ್ಯ ಅಧೀಕ್ಷಕರು ಹಾಗೂ 94 ಕಸ್ಟೋಡಿಯನ್‌ಗಳನ್ನು ನೇಮಿಸಲಾಗಿದೆ.
ಮುದ್ರಕರಿಂದ ಗೌಪ್ಯವಾಗಿ ಸರಬರಾಜಾಗುವ ಜಿಲ್ಲೆಗೆ ಸಂಬಂಧಿಸಿದ ಗೌಪ್ಯ ಪ್ರಶ್ನೆ ಪತ್ರಿಕೆ ಬಂಡಲ್ಗಳನ್ನು ಮಂಗಳೂರಿನಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ವೀಕರಿಸಲಿದ್ದು, ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಗೌಪ್ಯ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಜಿಲ್ಲಾ ಖಜಾನೆಯಲ್ಲಿ ಹಾಗೂ ಉಳಿದ 5 ವಲಯಗಳ ಗೌಪ್ಯ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಆಯಾ ತಾಲೂಕಿನ ಉಪಖಜಾನೆಯಲ್ಲಿ ಸಂರಕ್ಷಿಸಿಡಲಾಗುವುದು. ಈ ಬಗ್ಗೆ ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸಾಗಾಟದ ವಾಹನದಲ್ಲಿ ಖುದ್ಧು ಉಪಸ್ಥಿತರಿದ್ದು, ಸುರಕ್ಷಿತ ಸಾಗಾಟಕ್ಕೆ ಕ್ರಮವಹಿಸಲಿದ್ದಾರೆ. ಇದರ ಜೊತೆಗೆ ಪೊಲೀಸ್ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಆಯಾ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ ಭದ್ರತಾ ಕೊಠಡಿಯಲ್ಲಿಡಲಾಗುತ್ತದೆ.
ಮಾ.23ರಂದು ಪ್ರಥಮ ಭಾಷೆ, 26ರಂದು ಗಣಿತ, 28ರಂದು ಇಂಗ್ಲಿಷ್, ಎ.2ರಂದು ವಿಜ್ಞಾನ, 4ರಂದು ತೃತೀಯ ಭಾಷೆ, 6ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿಯು 2:45 ಗಂಟೆಯಾಗಿರುತ್ತದೆ. ಇದಲ್ಲದೆ ಪ್ರತೀ ಪರೀಕ್ಷೆಯ ಆರಂಭದಲ್ಲಿ 15 ನಿಮಿಷ ಪ್ರಶ್ನೆ ಪತ್ರಿಕೆಗಳನ್ನು ಓದಲು ಮೀಸಲಿರಿಸಲಾಗಿದೆ.