×
Ad

ಭಾರತದಲ್ಲಿ ಮಹಿಳೆಗೆ ಸ್ವಾತಂತ್ರ ನೀಡಿಲ್ಲ ಎಂಬುದು ಸುಳ್ಳು: ಅಕ್ಷಯ

Update: 2018-03-11 15:22 IST

ಉಡುಪಿ, ಮಾ.11: ಮನುಸ್ಮತಿಯನ್ನು ಉಲ್ಲೇಖಿಸಿ ಭಾರತದಲ್ಲಿ ಮಹಿಳೆಯರಿಗೆ ಅಧಿಕಾರದ ಸ್ವಾತಂತ್ರ ನೀಡಿಲ್ಲ ಎಂಬುದನ್ನೇ ಮಹಿಳಾವಾದಿಗಳು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಆದರೆ ಭಾರತ ಬಿಟ್ಟರೆ ಬೇರೆ ಯಾವ ದೇಶವು ತನ್ನ ನೆಲವನ್ನು ಮಾತೆಗೆ ಹೋಲಿಸಿಲ್ಲ. ಮಹಿಳೆಯರನ್ನು ಪೂಜಿಸುವಲ್ಲಿ ದೇವರು ಇರುತ್ತಾರೆಂದು ಹೇಳಿರುವುದು ಕೂಡ ಭಾರತದಲ್ಲೇ ಎಂದು ಕಾರ್ಕಳದ ಉಪನ್ಯಾಸಕಿ ಅಕ್ಷಯ ಗೋಖಲೆ ಹೇಳಿದ್ದಾರೆ.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಮಲ್ಪೆ ಲಯನ್ಸ್ ಮತ್ತು ಲಯನೆಸ್ ಕ್ಲಬ್, ಶಂಕರಪುರ ಬಂಟರ ಮಹಿಳಾ ವೇದಿಕೆಗಳ ಸಹಯೋಗದಲ್ಲಿ ರವಿವಾರ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿ ಸಲಾದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಕ್ಕಳಿಗೆ ಭಾರತದ ಸಂಸ್ಕೃತಿ ಹೇಳಿಕೊಡಬೇಕಾದ ಮಾತೆಯರು ಇಂದು ಟಿವಿ ಸೀರಿಯಲ್‌ಗಳಲ್ಲಿ ಮುಳುಗಿ ಹೋಗಿದ್ದಾರೆ. ಇವುಗಳ ಮಧ್ಯೆ ತಮ್ಮ ಮಕ್ಕಳು ಇಂಟರ್‌ನೆಟ್‌ಗಳಿಂದ ದಾರಿ ತಪ್ಪುತ್ತಿರುವ ವಿಚಾರ ಅವರಿಗೆ ಗೊತ್ತೆ ಇಲ್ಲ ಎಂದ ಅವರು, ಪ್ರತಿಯೊಂದು ಮನೆಯಲ್ಲಿ ದೇಶದ ಬಗ್ಗೆ ಚಿಂತನೆ ಮಾಡುವ ಮಗು ಹುಟ್ಟಿದರೆ ಮಾತ್ರ ಭಾರತ ಬದಲಾವಣೆಯಾಗಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ವಹಿಸಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ತಲ್ಲೂರು ಶಿವರಾಮ ಶೆಟ್ಟಿ, ಬಡಗ ಬೆಟ್ಟು ಸೊಸೈಟಿಯ ಜನರಲ್ ಮೆನೇಜರ್ ಜಯಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಮಮತಾ ಸುಧಾಕರ ಶೆಟ್ಟಿ, ಕೀರ್ತನಾ ಸುಧೀಂದ್ರ ದೇವಾಡಿಗ, ವೇದಾವತಿ ಆಚಾರ್ತಿ ನೇಜಾರು ಅವರನ್ನು ಸನ್ಮಾನಿಸಲಾಯಿತು.

ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಗಿರಿಜಾ ತಲ್ಲೂರು, ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ರಾಧಾದಾಸ್, ಮಮತಾ ಎಸ್.ಶೆಟ್ಟಿ, ಗೀತಾ ರವಿ ಉಪಸ್ಥಿತರಿದ್ದರು. ತಾಲೂಕು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ.ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ಮಂಡಳಿಗಳ ಸದಸ್ಯರಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News