ತಮಿಳುನಾಡಿಗೆ ಹರಿಯುವ ಕಾವೇರಿ ನೀರು ಮಲಿನ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ

Update: 2018-03-11 16:47 GMT

ಚೆನ್ನೈ, ಮಾ. 11: ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಯುವ ಮೊದಲೇ ಮಾಲಿನ್ಯಗೊಂಡಿರುತ್ತದೆ. ಈ ಮಾಲಿನ್ಯವನ್ನು ತಡೆಯಲು ಕರ್ನಾಟಕ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಲ್ಲಿಸಿದ ವರದಿಯಲ್ಲಿ, ಕಳೆದ ನಾಲ್ಕು ತಿಂಗಳುಗಳಿಂದ ನಡೆಸಲಾದ ಜಲ ಗುಣಮಟ್ಟ ಪರೀಕ್ಷೆಯ ಫಲಿತಾಂಶವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಉಲ್ಲೇಖಿಸಿದೆ.

ಸಂಸ್ಕರಿಸದ ನೀರನ್ನು ಕಾವೇರಿಗೆ ಹರಿಸುವುದನ್ನು ನಿಲ್ಲಿಸಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಕೋರಿ ತಮಿಳುನಾಡು ಸರಕಾರ 2015ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. 2017 ಜುಲೈಯಲ್ಲಿ ಸುಪ್ರೀಂ ಕೋರ್ಟ್ ಮನವಿಗೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎರಡೂ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳು ಸಂಘಟತವಾಗಿ ಕಾವೇರಿ ಹಾಗೂ ಅದರ ಉಪನದಿಗಳಾದ ಥೇನ್‌ಪೆನ್ನಾಯಾರ್ ಹಾಗೂ ಅರ್ಕಾವತಿಯಿಂದ 2017 ಸೆಪ್ಟಂಬರ್ ಹಾಗೂ ಡಿಸೆಂಬರ್ ನಡುವೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು.

ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಿಂದ ಈ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಥೇನ್‌ಪೆನ್ನಾಯಾರ್ ನದಿಯಿಂದ ಎಲ್ಲ ನಾಲ್ಕು ತಿಂಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ನೀರಿನ ಮಾದರಿ ಎಲ್ಲಾ ಮಾನದಂಡಗಳಲ್ಲಿ ವಿಫಲವಾಗಿತ್ತು. ಅರ್ಕಾವತಿ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಹಾಗೂ ಕಾವೇರಿ ಅಕ್ಟೋಬರ್‌ನಲ್ಲಿ ಮಾಲಿನ್ಯವು ಅಪಾಯದ ಮಿತಿ ಮೀರಿತ್ತು. ಅರ್ಕಾವತಿ ಹಾಗೂ ಕಾವೇರಿಯಲ್ಲಿ ಡಿಸೆಂಬರ್‌ನಲ್ಲಿ ಜೈವಿಕ ಮಾಲಿನ್ಯ ಅಸುರಕ್ಷಿತ ಮಟ್ಟಕ್ಕೆ ತಲುಪಿತ್ತು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News