ಮಡಿವಾಳರಿಂದ ಹಿಂದೂ ಸಂಸ್ಕೃತಿ ಉಳಿದಿದೆ : ಸಂಸದ ನಳಿನ್
ಮೂಡುಬಿದಿರೆ, ಮಾ.11 : ಎಲ್ಲಾ ಸಮುದಾಯದ ಜನರನ್ನು ಶುಭ್ರವಾಗಿ ಕಾಣುವಂತೆ ಮಾಡುವವರು ಮಡಿವಾಳರು. ನಿಷ್ಠೆ ಮತ್ತು ವಿಶ್ವಾಸಕ್ಕೆ ಮೊದಲ ಸ್ಥಾನದಲ್ಲಿರುವ ಮಡಿವಾಳರು ಶಿಕ್ಷಣ, ರಾಜಕೀಯ ಮತ್ತು ಉದ್ಯಮದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಇದು ಸಮುದಾಯದ ಹಿಂದಿನಿಂದ ಬಂದಿರುವ ನಡವಳಿಕೆಗಳನ್ನು ಯುವಜನರು ಉಳಿಸಿ ಬೆಳೆಸಿಕೊಂಡು ಹೋಗುವಂತ್ತಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಶಿವಮೊಗ್ಗದ ಸೃಷ್ಠಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಹೆಬ್ರಿ ತಿಮ್ಮ ಸೋಮಯ್ಯ ಮಡಿವಾಳ ಪ್ರತಿಷ್ಠಾನ ಮೂಡುಬಿದಿರೆ ಇದರ ವತಿಯಿಂದ ರವಿವಾರ ಮೂಡುಬಿದಿರೆಯ ಪದ್ಮಾವತಿ ಕಲಾಮಂದಿರದಲ್ಲಿ ಕಾಬೆಟ್ಟು ಓಬಯ್ಯ ಮಡಿವಾಳ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ ಮಡಿವಾಳರ ಸಂಸ್ಕೃತಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಸಕ ಕೆ. ಅಭಯಚಂದ್ರ ಮಾತನಾಡಿ ಹಿಂದುಳಿದ ವರ್ಗದವರ ಅಭಿವೃದ್ಧಿ ಹಿಂದುಳಿದ ವರ್ಗದವರಿಂದಲೇ ಸಾಧ್ಯ. ಅಂಬೇಡ್ಕರ್ ವಾದವನ್ನು ನಾವು ಒಪ್ಪುತ್ತೇವೆ. ದೇವರಾಜ್ ಅರಸು, ಇಂದಿರಾಗಾಂಧಿ, ಜನಾರ್ದನ ಪೂಜಾರಿ ಅವರು ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಬಡವರ ಪರವಾಗಿದ್ದಾರೆಂದು ಹೇಳಿದರು.
ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ಸಮ್ಮೇಳನವನ್ನು ಉದ್ಘಾಟಿಸಿ, ಸಾಹಿತಿ ವರದಾ ಶ್ರೀನಿವಾಸ್ ಅವರ "ಮಡಿವಾಳ ಮಾಚಿದೇವ" ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ ಬಡವನಾಗಿ ಹುಟ್ಟುವುದು ತಪ್ಪಲ್ಲ. ಬಡವನಾಗಿ ಸಾಯುವುದು ತಪ್ಪು. ಸೇವೆ ಪ್ರೀತಿಯಿಂದ ಆಗಬೇಕು. ಉತ್ತಮ ಕೆಲಸಗಳನ್ನು ಮಾಡಡಿದಾಗ ದೇವರ ಅನುಗ್ರಹ ಇರುತ್ತದೆ. ಹುಟ್ಟುವಾಗ ನಮಗೆ ಹೆಸರಿರುವುದಿಲ್ಲ ಆದರೆ ಸಾಯುವಾಗ ನಾವು ಹೆಸರು ಉಳಿಸಿ ಹೋಗುವಂತಹ ಕೆಲಸಗಳು ಆಗಬೇಕಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ವರದಾ ಶ್ರೀನಿವಾಸ್ ಮಾತನಾಡಿ ಮಡಿವಾಳ ಜನಾಂಗವು ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿಯುವಿಕೆ ಈ ಜಾತಿಯ ಹಿಂದುಳಿಯುವಿಕೆಗೆ ಕಾರಣ. ಅಷ್ಟೇ ಅಲ್ಲ. ಕೆಳದರ್ಜೆಯ ವೃತ್ತಿಯಿಂದ ಹೊರಬಾರದಿರಲು ಮೇಲು ಜಾತಿಯವರ ಹಿಡಿತವೂ ಅಷ್ಟೇ ಕಾರಣವಾಗಿದೆ. ಈ ಜನಾಂಗದಲ್ಲಿ ಇನ್ನೂ ಜೀವಾಂತವಾಗಿರುವ ದಾರಿದ್ರ್ಯ, ಆಲಸ್ಯ, ಕೀಳರಿಮೆ, ಮೂಢನಂಬಿಕೆ, ಸಂಕುಚಿತ ಮನೊಭಾವ, ದಾಸ್ಯಪರತೆ ಎಲ್ಲವೂ ದೂರವಾಗಬೇಕಾಗಿದೆ. ಈ ದಿಸೆಯಲ್ಲಿ ಮಡಿವಾಳ ಜನಾಂಗದವರು ಆರ್ಥಿಕವಾಗಿ ಸಬಲರಾಗಬೇಕಾದರೆ ಮೊದಲು ಬೇಕಾದುದು ಶಿಕ್ಷಣ. ಈ ನಿಟ್ಟಿನಲ್ಲಿ ಆಯಾ ಜನಾಂಗದವರನ್ನು ಆಯಾ ಜನಾಂಗದ ಜಾತಿ ಸಂಘ, ಸಂಸ್ಥೆಗಳು ಶಿಕ್ಷಣಕ್ಕೆ ಹುರಿದುಂಬಿಸಬೇಕು ಎಂದು ಹೇಳಿದರು.
ವಿಜಯಪುರದ ಉದ್ಯಮಿ ಸೂರಜ್ ಸಾಲ್ಯಾನ್, ಭದ್ರಾವತಿ ಮಡಿವಾಳ ಸಂಘದ ಅಧ್ಯಕ್ಷ ಬಿ.ವೆಂಕಟೇಶ್, ಕಾರ್ಕಳದ ಸುರೇಶ್ ಮಡಿವಾಳ, ಗಣೇಶ್ ಸಾಲ್ಯಾನ್, ಸೃಷ್ಠಿ ಚಾರಿಟೇಬಲ್ ಟ್ರಸ್ಟ್‌ನ ಪ್ರ.ಕಾರ್ಯದರ್ಶಿ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಚ್.ಟಿ ಸೋಮಯ್ಯ ಮಡಿವಾಳ ಪ್ರತಿಷ್ಠಾನದ ಅಧ್ಯಕ್ಷ ಸಾಣೂರು ಸತೀಶ ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಕ್ಷಾ ಮತ್ತು ಚಂದ್ರಕಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಾಕ್ಸ್ ರಾಜಕೀಯ ಪಕ್ಷಗಳು ನಮ್ಮ ಸಮಾಜಕ್ಕೆ ದ್ರೋಹ ಮಾಡುತ್ತಿವೆ. ಮಡಿವಾಳ ಸಮಾಜಕ್ಕೆ ಪ್ರತ್ಯೇಕ ನಿಗಮವನ್ನು ನೀಡಬೇಕೆಂದು ಆಗ್ರಹಿಸಿದ ಅಖಿಲ ಭಾರತ ಮಡಿವಾಳ ಮಹಾಸಭಾದ ಅಧ್ಯಕ್ಷ ಎಂಜೀರಪ್ಪ ಅವರು ಐ.ಎ.ಎಸ್ ಮತ್ತು ಕೆ.ಎ.ಎಸ್ ಓದುವವರಿಗೆ ಸಂಘಟನೆಯಿಂದ ಉಚಿತ ಊಟ, ವಸತಿಯನ್ನು ಒದಗಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಚುನಾವಣಾ ಖರ್ಚನ್ನು ಮಹಾಮಂಡಲದಿಂದ ನಿರ್ವಹಿಸಲಾಗುವುದು ಎಂದು ಹೇಳಿದರು.