ಕುತ್ತಾರು: ಮಹಿಳಾ ದಿನ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ
ಉಳ್ಳಾಲ, ಮಾ. 11: ಇಂದು ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸಹಿತ ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲಿಟ್ಟು ಸಾಧನೆ ಮಾಡಿ ದ್ದಾರೆ, ಈ ನಿಟ್ಟಿನಲ್ಲಿ ಮಹಿಳೆಯರಿಗೆ ಅವಕಾಶ ನೀಡುವುದು ಮುಖ್ಯ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ ಅಭಿಪ್ರಾಯಪಟ್ಟರು.
ಪ್ರಜ್ಞಾ ಸಲಹಾ ಕೇಂದ್ರದ ಇಆರ್‌ಡಬ್ಲ್ಯುಸಿ ಯೋಜನೆಯಡಿ ಕುತ್ತಾರ್ ದುರ್ಗಾವಾಹಿನಿ ಮಹಿಳಾ ಮಂಡಲದ ವತಿಯಿಂದ ಶನಿವಾರ ಕುತ್ತಾರ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಿಳೆಯರಿಗೆ ತೊಂದರೆಯಾದಾಗ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಅಭಯ, ಗೆಳತಿ ಯೋಜನೆಯಡಿ ಪರಿಹಾರ ಕಲ್ಪಿಸಲಾಗುತ್ತಿದೆ. ಸಾಧಕ ಮಹಿಳೆಯರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೆಳ್ಮ ಗ್ರಾಮ ಪಂ. ಅಧ್ಯಕ್ಷೆ ವಿಜಯ ಕೃಷ್ಣಪ್ಪ ಮಾತನಾಡಿ, ಇಂದು ಮಕ್ಕಳು ಅಮಲು ಪದಾರ್ಥಗಳ ದಾಸರಾಗುವ ಮೂಲಕ ದಾರಿ ತಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಸಂಸ್ಕೃತಿ, ಸಂಸ್ಕಾರದ ಪಾಠ ನೀಡುವ ಮೂಲಕ ಮಕ್ಕಳನ್ನು ದಾರಿ ತಪ್ಪದಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧಿಕಾರಿ ಶ್ಯಾಮಲಾ ಸಿ.ಕೆ, ಸಮಾಜ ಸೇವಕಿ ಲಲಿತಾ ಸುಂದರ್, ಪ್ರಸೂತಿ ತಜ್ಞೆ ಬೀಫಾತಿಮ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯೆಯರಾದ ತಂಗಮ್ಮ, ಭಾರತಿ, ನಳಿನಿ ಹಾಗೂ ಪದ್ಮಾವತಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರಾಟೆ ಪಟುಗಳನ್ನು ಗೌರವಿಸಲಾಯಿತು.
ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಮಾಜಿಕ ಕಾರ್ಯರ್ತೆ ಸುಹಾಸಿನಿ ಕೂಟತ್ತಜೆ ಉದ್ಘಾಟಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ಸಂಯೋಜಕರಾದ ವಿಲಿಯಂ, ಸುಹಾಸ್, ಯಶೋಧ, ಗಟ್ಟಿ ಸಮಾಜದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಸ್ವಾಗತಿಸಿದರು. ಸವಿತಾ ಬಹುಮಾನ ವಿಜೇತರ ಹೆಸರು ವಾಚಿಸಿದರು. ರೇಶ್ಮಾ ವಂದಿಸಿದರು. ಶೃತ ಕಾರ್ಯಕ್ರಮ ನಿರೂಪಿಸಿದರು.