ಭಟ್ಕಳ: ಕಾಲೇಜು ವಿದ್ಯಾರ್ಥಿಗಳ ಫೋಟೊ ದುರ್ಬಳಕೆ; ಓರ್ವನ ಬಂಧನ
ಭಟ್ಕಳ, ಮಾ. 11: ತಾಲೂಕಿನ ಪ್ರತಿಷ್ಠಿತ ಕಾಲೇಜೊಂದರ ಹಿಂದೂ-ಮುಸ್ಲಿಮ್ ಸಹಪಾಠಿಗಳ ಸೆಲ್ಫಿ ಫೋಟೊಗಳನ್ನು ಬಳಸಿ ಅಶ್ಲೀಲ ಫೋಟೊಗಳಾಗಿ ಸೃಷ್ಟಿಸಿ ಲವ್ ಜಿಹಾದ್ ಎಂದು ಬಿಂಬಿಸಿ ಕೃತ್ಯ ಎಸಗುತ್ತಿರುವ ಓರ್ವನನ್ನು ಬಂಧಿಸಿದ ಜಿಲ್ಲಾ ಪೊಲೀಸ್ ವಿಶೇಷ ತಂಡ ಈ ಪ್ರಕರಣದಲ್ಲಿ ಹಲವು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯೋಗೇಶ, ತಿರು, ಹೇಮಂತ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಯೋಗೇಶ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದುಳಿದ ಬಡ ಕುಟುಂಬಕ್ಕೆ ಸೇರಿದ ಇಬ್ಬರು ಯುವತಿಯರ ಸೆಲ್ಫಿ ಫೋಟೊವನ್ನು ಬಳಸಿಕೊಂಡಿರುವ ದುಷ್ಕರ್ಮಿಗಳು ಅಶ್ಲೀಲ ಫೋಟೊ ಗಳೊಂದಿಗೆ ಜೋಡಿಸಿದ್ದಲ್ಲದೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಯಬಿಟ್ಟಿದ್ದು, ಪ್ರತಿಷ್ಠಿತ ಕಾಲೇಜೊಂದರ ಹೆಸರನ್ನು ಬಳಸಿಕೊಂಡು "ಇಲ್ಲಿ ಓದುತ್ತಿರುವ ಹಿಂದೂ ವಿದ್ಯಾರ್ಥಿನಿಯರೊಂದಿಗೆ ಮುಸ್ಲಿಮ್ ವಿದ್ಯಾರ್ಥಿಗಳು ಲವ್ ಜಿಹಾದ್ ನಡೆಸುತ್ತಿದ್ದಾರೆ. ಇದರಿಂದಾಗಿ ಹಿಂದೂ ಧರ್ಮ ಅಪಾಯದಲ್ಲಿದೆ" ಎನ್ನುವಂತಹ ಬರಹಗಳನ್ನು ಉದ್ರಿಕ್ತ ಶೀರ್ಷಿಕೆಯೊಂದಿಗೆ ಜಾಲಾತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ.
ಈ ಕುರಿತಂತೆ ಅಮಾಯಕ ವಿದ್ಯಾರ್ಥಿನಿಯರ ಪಾಲಕರು ಹಾಗೂ ಮುರುಡೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಎಲ್ಲರನ್ನೂ ಬಂಧಿಸಲಾಗುವುದು-ಎಸ್.ಪಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಇಂಹತ ಕುಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಲಾಗುವುದು. ಯಾರು ಕೂಡ ಇಂತಹ ಸಂದೇಶಗಳನ್ನು ಲೈಕ್ , ಫಾರ್ವರ್ಡ್ ಮಾಡಕೂಡದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.