ವೈಟ್ ಡೌವ್ಸ್ ಆರೈಕೆ ಮಾಡಿದ ಅನಾಮಿಕ ವ್ಯಕ್ತಿಯ ಗುರುತುಪತ್ತೆ: ಕುಟುಂಬಸ್ಥರಿಗೆ ಹಸ್ತಾಂತರ
ಮಂಗಳೂರು, ಮಾ.12: ನಗರದ ವೈಟ್ ಡೌವ್ಸ್ ಸಂಸ್ಥೆಯಿಂದ ರೈಲ್ವೇ ನಿಲ್ದಾಣದ ಬಳಿ ಅನಾಥ ಹಾಗೂ ಮಾನಸಿಕ ಅಸ್ವಸ್ಥತೆಯ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಗೆ ರಕ್ಷಣೆ ನೀಡಿ, ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಆ ವ್ಯಕ್ತಿಯನ್ನು ಕುಟುಂಬಸ್ಥರಿಗೆ ಒಪ್ಪಿಸುವ ಕಾರ್ಯ ಮಾಡಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ತಿಳಿಸಿದ ಸಂಸ್ಥೆಯ ಮ್ಯಾನೇಜರ್ ಜೆರಾಲ್ಡ್ ಫೆರ್ನಾಂಡಿಸ್, 2017ರ ಜೂನ್ 21ರಂದು ಸಂಸ್ಥೆಗೆ ಕರೆಯೊಂದು ಬಂದಿದ್ದು, ನಗರದ ರೈಲ್ವೇ ಸ್ಟೇಷನ್‌ನ ಎಟಿಎಂ ಕಿಯೋಸ್ಕ್‌ನಲ್ಲಿ ವ್ಯಕ್ತಿಯೊಬ್ಬರು ಮೈಮೇಲೆ ಬಟ್ಟೆಬರೆ ಇಲ್ಲದೆ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ತೆರಳಿದ ಸಂಸ್ಥೆಯ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಅನಾಮಿಕ ವ್ಯಕ್ತಿಯನ್ನು ಆರಂಭದಲ್ಲಿ ನಗರದ ವೆನ್‌ಲಾಕ್ ಹಾಗೂ ಬಳಿಕ ಕೆಎಂಸಿಯಲ್ಲಿ ಚಿಕಿತ್ಸೆ ಕೊಡಿಸಿದರು. ಬಳಿಕ ವ್ಯಕ್ತಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿ ಆತ ಕೇರಳದ ಕೊಟ್ಟಾಯಂನವರು ಎಂದು ತಿಳಿದು ಬಂತು. ಸ್ಥಿತಿವಂತ ಕುಟುಂಬದವರಾದ ಈ ವ್ಯಕ್ತಿಯ ಹೆಸರು ಮನು ರಾಮನ್ ನಾಯರ್ ಎಂಬುದಾಗಿದ್ದು, ಮಾನಸಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ತನ್ನ ತಾಯಿಯನ್ನು ತಳ್ಳಿದ ಪರಿಣಾಮವಾಗಿ ಆಕೆ ಸಾವನ್ನಪ್ಪಿದ್ದರು. ಇದಕ್ಕಾಗಿ ಅವರಿಗೆ ಜೈಲು ಶಿಕ್ಷೆಯಾಗಿ ಬಳಿಕ ಮಾನಸಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದು ಹೇಗೋ ಮಂಗಳೂರಿಗೆ ಅವರು ತಲುಪಿದ್ದರು. ಇದೀಗ ಅವರು ಬಹುತೇಕ ಗುಣಮುಖರಾಗಿದ್ದು, ಅವರ ಕುಟುಂಬಸ್ಥರು (ಬಾವಂದಿರು) ಅವರನ್ನು ತಮ್ಮ ಜತೆ ಕರೆದೊಯ್ದು ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಿ ಅವರ ಜವಾಬ್ಧಾರಿ ವಹಿಸಲು ಒಪ್ಪಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ಮನೆಯವರಿಗೆ ಹಸ್ತಾಂತರಿಸಲಾಗುತ್ತಿದೆ. ಮನು ಅವರು ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ್ದಾರೆ ಎಂದು ವಿವರ ನೀಡಿದರು.
ಜೈಲಿನಿಂದ ಮಾನಸಿಕ ಚಿಕಿತ್ಸೆಗಾಗಿ ಕೇರಳದ ಆಸ್ಪತ್ರೆಯೊಂದಕ್ಕೆ ಮನು ಅವರನ್ನು ಸೇರಿಸಲಾಗಿದ್ದು, ಅವರು ಅಲ್ಲಿಂದ ತಪ್ಪಿಸಿಕೊಂಡ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಹುಡುಕಾಟ ನಡೆಸಿದ್ದೆವು ಎಂದು ಮನು ಅವರ ಸಂಬಂಧಿಕರಾದ ಬಿ.ಎಸ್. ರಾಜು ತಿಳಿಸಿದರು.
ಗೋಷ್ಠಿಯಲ್ಲಿ ವೈಟ್ ಡೌವ್ಸ್‌ನ ಸ್ಥಾಪಕಾಧ್ಯಕ್ಷರಾದ ಕೊರಿನ್ ರಸ್ಕೀನಾ, ಮನು ಅವರ ಇನ್ನೋರ್ವ ಸಂಬಂಧಿ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.