ರೊಹಿಂಗ್ಯಾರ ಮನೆ, ಮಸೀದಿ ಇದ್ದಲ್ಲಿ ಈಗ ಮ್ಯಾನ್ಮಾರ್ ಸೇನೆಯ ಶಿಬಿರ

Update: 2018-03-12 12:53 GMT

ಯಾಂಗೂನ್, ಮಾ.12: ಮ್ಯಾನ್ಮಾರ್‍ನಿಂದ ಸುಮಾರು ಏಳುಲಕ್ಷ ರೊಹಿಂಗ್ಯಾರನ್ನು ಬಡಿದೋಡಿಸಿ ಅವರಿದ್ದಲ್ಲಿ ಸೇನಾ ಶಿಬಿರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆ್ಯಮ್ನೆಸ್ಟಿ ಇಂಟರ್‍ನ್ಯಾಶನಲ್ ಹೇಳಿದೆ.

ಸಟಲೈಟ್ ಚಿತ್ರಗಳ ಸಹಾಯಪಡೆದು ಆ್ಯಮ್ನೆಸ್ಟಿ ಈ ಆರೋಪ ಹೊರಿಸಿದ್ದು ರೊಹಿಂಗ್ಯಾರ ಮನೆ ಮತ್ತು ಮಸೀದಿ ಇದ್ದಲ್ಲಿ  ಈಗ ಮ್ಯಾನ್ಮಾರ್ ಸೇನೆಯ ಕಟ್ಟಡಗಳು ಏಳುತ್ತಿವೆ. ಗ್ರಾಮದ ಅಳಿದುಳಿದ ಭಾಗಗಳನ್ನು ಬುಲ್‍ಡೋಝರ್‍ನಲ್ಲಿ ಕೆಡವಿ ಕಟ್ಟಡ ನಿರ್ಮಾಣಕಾಮಗಾರಿ ಭರದಿಂದ ನಡೆಯುತ್ತಿದೆ ಎಂದು ಆ್ಯಮ್ನೆಸ್ಟಿ ಬಹಿರಂಗಪಡಿಸಿದೆ.

ಈ ಪ್ರದೇಶದಲ್ಲಿ  ಮನೆಗಳ,ರಸ್ತೆಗಳ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇಲ್ಲಿಂದ ಹೊರಟುಹೊಗಲು ಸಿದ್ಧರಿಲ್ಲದ ರೊಹಿಂಗ್ಯಾ ಮುಸ್ಲಿಮರನ್ನು ಬಲವಂತದಿಂದ ತೆರವುಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.
ರೊಹಿಂಗ್ಯಾ ಮುಸ್ಲಿಮರಿಗೆ ಕಿರುಕುಳ ನೀಡಿದವರಿಗಾಗಿ ಸೇನೆ  ಹೊಸ ಕಟ್ಟಡಗಳನ್ನು ಕಟ್ಟಿಸುತ್ತಿದೆ ಎಂದು ಆ್ಯಮ್ನೆಸ್ಟಿಯ ಕ್ರೈಸಿಸ್ ರೆಸ್ಪೋನ್ಸ್ ನಿರ್ದೇಶಕ ತಿರಾನ ಹಸನ್ ಹೇಳಿದ್ದಾರೆ.

ಕಳೆದ ಆಗಸ್ಟ್‍ನಲ್ಲಿ ಮ್ಯಾನ್ಮಾರ್ ನ ರಖೇನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರು  ವಾಸಿಸುತ್ತಿದ್ದ 350 ಗ್ರಾಮಗಳನ್ನೇ ಸೇನೆ ಅಗ್ನಿಗೆ ಆಹುತಿ ನೀಡಿತ್ತು.  ಇಲ್ಲಿಂದ ಈಗಾಗಲೇ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ಸೇನೆಯ ದಾಳಿ ಸಹಿಸಲಾಗದೆ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News