ಕಾರ್ಪೊರೇಶನ್ ಬ್ಯಾಂಕ್ ಸಂಸ್ಥಾಪಕ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ದೂರದೃಷ್ಟಿಯ ನಾಯಕ: ಜೈ ಕುಮಾರ್ ಗರ್ಗ್
ಮಂಗಳೂರು, ಮಾ.12: ಕಾರ್ಪೊರೇಶನ್ ಬ್ಯಾಂಕ್ ಸಂಸ್ಥಾಪಕ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹದ್ದೂರು ದೂರದೃಷ್ಟಿಯ ನಾಯಕರಾಗಿದ್ದರು. ಅವರ ದೂರದೃಷ್ಟಿಯ ಫಲವಾಗಿ ಬ್ಯಾಂಕ್ ವಿಸ್ತಾರವಾಗಿ ಬೆಳೆಯಲು ಕಾರಣವಾಗಿದೆ. ಗ್ರಾಹಕರ ಸಂತೃಪ್ತಿ ನಮ್ಮ ಪ್ರಥಮ ಗುರಿಯಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೈ ಕುಮಾರ್ ಗರ್ಗ್ ತಿಳಿಸಿದ್ದಾರೆ.
ಅವರು ನಗರದ ಕಾರ್ಪೊರೇಶನ್ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡ 113ನೇ ಸಂಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಪ್ ಬ್ಯಾಂಕ್ ಇ-ಪಾಸ್ ಬುಕ್ ಯೋಜನೆಗೆ ಚಾಲನೆ ನೀಡಿ ನಂತರ ಮಾತನಾಡಿದರು.
ಉಡುಪಿಯಲ್ಲಿ 112ವರ್ಷಗಳ ಹಿಂದೆ ಕೇವಲ 38 ರೂಪಾಯಿ,12 ಆಣೆ ಹಾಗೂ 2 ಪೈಸೆ ಬಂಡವಾಳದೊಂದಿಗೆ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹದ್ದೂರು ಆರಂಭಿಸಿದ ಕಾರ್ಪೊರೇಶನ್ ಬ್ಯಾಂಕ್ ಪ್ರಸಕ್ತ 3,30,000 ಕೋಟಿ ರೂ. ಆರ್ಥಿಕ ವ್ಯವಹಾರ ಮಾಡುವ ಸಂಸ್ಥೆಯಾಗಿ ಬೆಳೆದಿದೆ. 3169 ಎಟಿಎಂಗಳನ್ನು 2,501 ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಬ್ಯಾಂಕ್, ದೇಶದಲ್ಲಿ 4721 ಶಾಖೆ ರಹಿತ ಬ್ಯಾಂಕ್ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. 2,01,488 ಕೋಟಿ ರೂ. ಬಂಡವಾಳ ಹೊಂದಿದೆ. 1991ರಿಂದ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಬ್ಯಾಂಕ್, ನಿರಂತರವಾಗಿ ಗ್ರಾಹಕರ ಸೇವೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಜನರಿಗೆ ಹತ್ತಿರವಾಗುವ ಸೇವೆಯನ್ನು ಬ್ಯಾಂಕ್ ಆರಂಭದ ದಿನಗಳಿಂದಲೂ ಮಾಡುತ್ತಾ ಬಂದಿದೆ ಎಂದು ಜೈ ಕುಮಾರ್ ಗರ್ಗ್ ತಿಳಿಸಿದ್ದಾರೆ.
ಬ್ಯಾಂಕ್‌ಗಳ ಎನ್‌ಪಿಎ ಮೊತ್ತ ಬೆಳೆಯದಂತೆ ನಿಭಾಯಿಸುವುದು ಬ್ಯಾಂಕ್‌ಗಳ ಮುಂದಿರುವ ಸವಾಲಾಗಿದೆ. ಕಾರ್ಪೊರೇಶನ್ ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಬ್ಯಾಂಕ್ ಗ್ರಾಹಕರ ಸಂತೃಪ್ತಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಥಮ ಆಧ್ಯತೆ ನೀಡುತ್ತಾ ಬಂದಿದೆ ಹಾಗೂ ಸಾರ್ವಜನಿಕರ ಹಣಕ್ಕೆ ಭದ್ರತೆ ಒದಗಿಸುತ್ತಾ ಬಂದಿದೆ ಎಂದು ಜೈ ಕುಮಾರ್ ಗರ್ಗ್ ಹೇಳಿದರು.
ಬ್ಯಾಂಕ್‌ನ ಜಿಎಂ ವಿ. ಶ್ರೀಧರ್ ಇ ಪಾಸ್ ಬುಕ್‌ನ ವಿಶೇಷತೆಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬ್ಯಾಂಕಿನ ವಿಜಿಲೆನ್ಸ್ ಅಧಿಕಾರಿ ಪಿ.ವಿ.ಬಿ.ಎನ್.ಮೂರ್ತಿ ಉಪಸ್ಥಿತರಿದ್ದರು.
ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಜಯರಾಮಭಟ್, ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಸಂಸ್ಥಾಪಕರಿಗೆ ನಮನ ಸಲ್ಲಿಸಿದರು. ಬ್ಯಾಂಕಿನ ಮಹಾ ಪ್ರಬಂಧಕ ಯು.ವಿ.ಕಿಣಿ ಸ್ವಾಗತಿಸಿದರು.