×
Ad

ಅನಿರ್ಧಿಷ್ಟಾವಧಿ ಹೋರಾಟವನ್ನು ಹಿಂಪಡೆದುಕೊಂಡ ಡಿವೈಎಫ್‌ಐ

Update: 2018-03-12 21:28 IST

ಸುರತ್ಕಲ್, ಮಾ. 12: ಸುರತ್ಕಲ್ ಸ್ಥಳಾಂತರಿತ ಮಾರುಕಟ್ಟೆ ಕಟ್ಟಡದ ಗೋಡೆಗಳನ್ನು ಅಂಗಡಿದಾರರು ಒಡೆದು ಹಾಕಿದ ನಂತರ, ಮಾರುಕಟ್ಟೆ ಅಕ್ರಮಗಳ ವಿರುದ್ಧ ಹಗಲು-ರಾತ್ರಿ ಅನಿರ್ಧಿಷ್ಟಾವಧಿ ಧರಣಿ ಕೂತಿದ್ದ ಡಿವೈಎಫ್‌ಐ ಸುರತ್ಕಲ್ ಘಟಕವು ಸೋಮವಾರ ಒಡೆದ ಗೋಡೆಗಳನ್ನು ಪಾಲಿಕೆ ಮರು ನಿರ್ಮಿಸಲು ತೊಡಗಿದ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯಲು ನಿರ್ಧರಿಸಿದೆ.

ಒಡೆದ ಪಾಲಿಕೆಯ ಕಟ್ಟಡಗಳನ್ನು ಮರು ನಿರ್ಮಿಸಬೇಕು, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಉಂಟು ಮಾಡಿದವರಿಂದ ದಂಡ ವಸೂಲಿ ಮಾಡಬೇಕು, ಅಕ್ರಮವಾಗಿ ನಡೆದಿರುವ ಅಂಗಡಿ ಹಂಚಿಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಕ್ರಮಬದ್ಧವಾಗಿ ನಡೆಸಬೇಕು, ತಾತ್ಕಾಲಿಕ ಕಟ್ಟಡಕ್ಕೆ ಐದು ಕೋಟಿ ರೂ. ಖರ್ಚು ಮಾಡಿರುವುದರ ಹಿಂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಗುತ್ತಿಗೆ ದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ. ಗುತ್ತಿಗೆ, ಕಾಮಗಾರಿ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲಾ ವ್ಯಾಪಾರಿಗಳಿಗೂ ಸ್ಥಳಗಳನ್ನು ನಿಗದಿಪಡಿಸಬೇಕು, ಹೊಸದಾಗಿ ನಿರ್ಮಾಣಗೊಳ್ಳುವ ಮಾರುಕಟ್ಟೆ ಸಂಕೀರ್ಣ ದಲ್ಲಿ ಹಳೆ ಮಾರುಕಟ್ಟೆ ವ್ಯಾಪಾರಿಗಳಿಗೆ ಮಳಿಗೆಗಳನ್ನು ಖಾತರಿ ಪಡಿಸಬೇಕು. ಸ್ಥಳಾಂತರದ ಸಂದರ್ಭ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಾರ್ವಜನಿಕರು, ಮಾರುಕಟ್ಟೆ ವ್ಯಾಪಾರಿಗಳ ಬೆಂಬಲದೊಂದಿಗೆ ಡಿವೈಎಫ್‌ಐ ಕಾರ್ಯಕರ್ತರು ಕಳೆದ ಹತ್ತು ದಿನಗಳಿಂದ ಮಾರುಕಟ್ಟೆ ಮುಂಭಾಗ ಹಗಲು ರಾತ್ರಿ ಧರಣಿ ನಡೆಸುತ್ತಿದ್ದರು.

ಧರಣಿಯ 8ನೆ ದಿನ ಶಾಸಕ ಮೊಯ್ದಿನ್ ಬಾವ, ಮಂಗಳೂರು ಎ.ಸಿ., ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದ್ದರು. ಕೊನೆಗೂ ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದ ಪಾಲಿಕೆ ಇಂದು ಒಡೆದ ಕಟ್ಟಡಗಳನ್ನು ಸರಿಪಡಿಸುವುದಾಗಿ ಹೇಳಿ, ಕಾಮಗಾರಿಯನ್ನು ಆರಂಭಿಸಿದ್ದಾರೆ. ಇದರಿಂದಾಗಿ ಅನಿರ್ಧಿಷ್ಟ ಧರಣಿಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದೇವೆ ಎಂದು ಡಿವೈಎಫ್‌ಐ ಮುಖಂಡರಾದ ಮುನೀರ್ ಕಾಟಿಪಳ್ಳ, ಬಿ.ಕೆ.ಇಮ್ತಿಯಾಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News