ಅಪರಿಚಿತ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2018-03-12 21:39 IST
ಬೈಂದೂರು, ಮಾ.12: ಶಿರೂರು ಗ್ರಾಮದ ಸಂಕದಗುಂಡಿ ಸೇತುವೆ ಬಳಿ ರವಿವಾರ ರಾತ್ರಿ ವೇಳೆ ಬೈಕಿಗೆ ಅಪರಿಚಿತ ವಾಹನ ವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಸಹಸವಾರ ಗಾಯಗೊಂಡ ಬಗ್ಗೆ ವರದಿ ಯಾಗಿದೆ.
ಮೃತರನ್ನು ಭಟ್ಕಳ ಚೌತನಿ ನಿವಾಸಿ ರಕಿಬ್ ಎಂದು ಗುರುತಿಸಲಾಗಿದೆ. ಸಹ ಸವಾರ ಭಟ್ಕಳದ ಚೌತನಿ ನಿವಾಸಿ ಅಬು ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ 11ಗಂಟೆಗೆ ಇವರಿಬ್ಬರು ಶಿರೂರಿಗೆ ಹೋಗಿ ಬರುವುದಾಗಿ ಹೇಳಿ ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ಅಪರಿಚಿತ ವಾಹನ ಇವರ ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ರಕಿಬ್ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಅಪಘಾತವು ಇಂದು ಬೆಳಗ್ಗೆ 6:30ರ ಸುಮಾರಿಗೆ ಬೆಳಕಿಗೆ ಬಂದಿದ್ದು, ಬೈಕಿನ ಬಳಿ ಗಾಯಗೊಂಡು ಬಿದ್ದಿದ್ದ ಅಬು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.