ಮಾ.15ರಂದು ಉಡುಪಿಯಲ್ಲಿ ರಾಮೋತ್ಸವ
ಉಡುಪಿ, ಮಾ.12: ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳಗಳ ನೇತೃತ್ವದಲ್ಲಿ ವಿಎಚ್‌ಪಿಯ ರಾಷ್ಟ್ರೀಯ ಉತ್ಸವಗಳಲ್ಲಿ ಒಂದಾಗ ರಾಮೋತ್ಸವ ಆಚರಣೆಯನ್ನು ಮಾ.15ರಂದು ಮಲ್ಪೆಯ ಕಡಲ ತೀರದಲ್ಲಿ ಆಚರಿಸಲಾಗುವುದು ಎಂದು ವಿಶ್ವ ಹಿಂದು ಪರಿಷದ್‌ನ ಜಿಲ್ಲಾಧ್ಯಕ್ಷ ಪಿ.ವಿಲಾಸ್ ನಾಯಕ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ವಿಜೃಂಭ್ರಣೆಯಿಂದ ನಡೆಯುವ ರಾಮೋತ್ಸವವನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ ಎಂದರು. ಮಾ.25ರ ಬೆಳಗ್ಗೆ 8 ಗಂಟೆಗೆ ಮಲ್ಪೆಯ ಏಳೂರು ಮೊಗವೀರ ಸಭಾಭವನದಿಂದ ಶ್ರೀರಾಮನ ಮೂರ್ತಿಯನ್ನು ಮೆರವಣಿಗೆಯೊಂದಿಗೆ ತಂದು ಪ್ರತಿಷ್ಠಾಪಿಸಲಾಗುವುದು ಎಂದರು.
ಬಳಿಕ ದಿನವಿಡೀ ವೈವಿಧ್ಯಮಮಯ ಕಾರ್ಯಕ್ರಮಗಳು ನಡೆಯಲಿವೆ. 11:30ರವೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಆ ಬಳಿಕ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಸಂಜೆ 4:30ರಿಂದ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, 5:30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ದುಷ್ಟಸಂಹಾರದ ದ್ಯೋತಕವಾಗಿ ರಾವಣನ ಪ್ರತಿಕೃತಿ ದಹನ ಹಾಗೂ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ 1,500 ಕಾರ್ಯಕರ್ತರು ಸೇರಿದಂತೆ 10,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಜರಂಗ ದಳದ ಸಂಚಾಲಕ ದಿನೇಶ್ ಮೆಂಡನ್, ನಗರ ಸಂಚಾಲಕ ಸಂತೋಷ ಸುವರ್ಣ ಬೊಳ್ಜೆ, ಅನಿಲ್ ಉಪಸ್ಥಿತರಿದ್ದರು.