×
Ad

ಮುಡಿಪು-ಮೂಳೂರು ರಸ್ತೆ ಅವ್ಯವಸ್ಥೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Update: 2018-03-12 21:57 IST

ಕೊಣಾಜೆ, ಮಾ. 12: ಮುಡಿಪು ಚೆಕ್‌ಪೋಸ್ಟ್‌ನಿಂದ ಮೂಳೂರುವರೆಗಿನ ರಸ್ತೆ ದುರವಸ್ಥೆಯ ವಿರುದ್ಧ ಮಂಗಳೂರು ಕ್ಷೇತ್ರ ಎಸ್‌ಡಿಪಿಐ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹಾರೀಶ್ ಮಲಾರ್ ಅವರು, ನಾವು ಪ್ರತಿಭಟನೆ ಮಾಡಿದರೆ ರಾಜಕೀಯ ಎಂದು ಆರೋಪಿಸಲಾಗುತ್ತದೆ, ಆದರೆ ಎಂದಿಗೂ ರಾಜಕೀಯಕ್ಕಾಗಿ ಯಾವುದೇ ಹೋರಾಟ ಮಾಡಿಲ್ಲ. ಈಗ ಮಾಡುತ್ತಿರುವ ಪ್ರತಿಭಟನೆಯೂ ಸಮಸ್ಯೆಯ ವಿರುದ್ಧ ಆಗಿದೆ ಎಂದು ಹೇಳಿದರು.

ಮುಡಿಪು ಮೂಳೂರು ರಸ್ತೆಯು ಮಂಚಿ, ಕಲ್ಲಡ್ಕ ಸಂಪರ್ಕಿಸುವ ಮುಖ್ಯ ರಸ್ತೆ ಆಗಿದ್ದರೂ ಕಳೆದ ಮೂರು ವರ್ಷಗಳಿಂದ ಹೊಂಡಗಳಿಂದ ಕೂಡಿದೆ, ಈ ಭಾಗದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು ರಸ್ತೆ ದುರವಸ್ತೆಯಿಂದ ಅಟೋದಲ್ಲೇ ಹೆರಿಗೆ ಆಗಿರುವ ಪ್ರಸಂಗಗಳೂ ನಡೆದಿವೆ. ಶಾಸಕರಲ್ಲಿ ಪ್ರಶ್ನಿಸಿದರೆ ಕೈಗಾರಿಕಾ ವಲಯದಲ್ಲಿದೆ ಎಂದು ಹೇಳುತ್ತಾರೆ. ಆದರೆ ಈ ಪ್ರದೇಶ ಇರುವುದು ಭಾರತದ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲೇ ಹೊರತು ಅಮೆರಿಕಾ, ಪಾಕಿಸ್ತಾನದಲ್ಲಿ ಅಲ್ಲ. ಹತ್ತು ದಿನಗಳಲ್ಲಿ ದುರಸ್ತಿ ಕೆಲಸ ನಡೆಯದಿದ್ದರೆ ದೇರಳಕಟ್ಟೆಯಲ್ಲೇ ರಸ್ತೆ ತಡೆದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ಪ್ರಯುಕ್ತ ರಸ್ತೆತಡೆ ನಡೆಸಲಾಯಿತು. ಕ್ಷೇತ್ರ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಪ್ರಮುಖರಾದ ಝಾಯಿದ್ ಮಲಾರ್, ಹಸೈನಾರ್ ಕೊಣಾಜೆ, ಕಾದರ್ ಮೂಳೂರು, ಸಂಶುದ್ದೀನ್ ಮೂಳೂರು, ಇಬ್ರಾಹಿಂ ಇರಾ ಪರಪ್ಪು, ಆಸಿಫ್ ಪಜೀರ್, ಸಿರಾಜ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News