ಉದ್ಯಮಿ ಕಮ್ಮಾಡಿ ಹಾಜಿಗೆ ‘ಐಡಿಯಲ್ ರತ್ನ’ ಪ್ರಶಸ್ತಿ
ಪುತ್ತೂರು, ಮಾ. 12: ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಉದ್ಯಮಿ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರಿಗೆ ‘ಐಡಿಯಲ್ ರತ್ನ ಪ್ರಶಸ್ತಿ-2018’ ನೀಡಿ ಗೌರವಿಸಲಾಯಿತು.
ಪುತ್ತೂರು ತಾಲೂಕಿನ ಕೊರಿಂಗಿಲ ಸ್ವಲಾತ್ ಮಜ್ಲಿಸ್ ಇದರ ಆಶ್ರಯದಲ್ಲಿ ಇಲ್ಲಿನ ಬಾಅಲವಿ ಮಸ್ಜಿದ್ ಸ್ವಲಾತ್ ನಗರ ಕೊರಿಂಗಿಲ ಎಂಬಲ್ಲಿ ನಡೆದ 6ನೆ ಸ್ವಲಾತ್ ವಾರ್ಷಿಕ ಹಾಗೂ ಏಕ ದಿನದ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಐಡಿಯಲ್ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ವಲಾತ್ ಮಜ್ಲಿಸ್ ಕೊರಿಂಗಿಲ ಬೆಟ್ಟಂಪಾಡಿ ವತಿಯಿಂದ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರಿಗೆ ಐಡಿಯಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಹಲವು ಮಸೀದಿಗಳ ನಿರ್ಮಾಣಕ್ಕೆ ಕಾರಣಕರ್ತರಾಗಿರುವ ಕಮ್ಮಾಡಿ ಇಬ್ರಾಹಿಂ ಹಾಜಿ ಅವರು ಕೊಡುಗೈ ದಾನಿಯಾಗಿ ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ಸ್ಥಾಪಕರಾಗಿದ್ದು, ಕಳೆದ ಸುಮಾರು 16 ವರ್ಷಗಳಿಂದ ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳು ಕಮ್ಮಾಡಿ ಇಬ್ರಾಹಿಂ ಹಾಜಿ ಅವರಿಗೆ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ, ಪೇಟ ತೊಡಿಸಿ, ಸನ್ಮಾನ ಪತ್ರ ನೀಡಿ ಗೌರವಿಸಿದರು.