ಕಡಬ: ವಿದ್ಯುತ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಧರಣಿ
ಕಡಬ, ಮಾ.12. ಬಹುದಿನಗಳಿಂದ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ರಾಮಕುಂಜದ ಗೋಳಿತ್ತಡಿಯಿಂದ ಆತೂರು ಸಿ.ಎ. ಬ್ಯಾಂಕಿನವರೆಗೆ ದೊಂದಿ ಮೆರವಣಿಗೆಯ ಪ್ರತಿಭಟನೆ ಸೋಮವಾರ ರಾತ್ರಿ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ, ಬಿಜೆಪಿ ಮುಖಂಡ ಕಿಶೋರ್ ಶಿರಾಡಿ ಮಾತನಾಡಿ, ದಿನದ 24 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡುತ್ತೇವೆ ಎಂದು ಜಾಹೀರಾತಿನಲ್ಲಿ ಹೇಳುವ ಸಚಿವರು ಮಾತು ಉಳಿಸಿಕೊಳ್ಳದೆ ಭ್ರಷ್ಟರಾಗಿದ್ದಾರೆ. ಇಂತಹ ಲಜ್ಜೆಗೆಟ್ಟ ಸರಕಾರ ತೊಳಗಿದರೆ ಮಾತ್ರ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಸರಕಾರದ ವಿರುದ್ಧ ಹರಿಹಾಯ್ದರು. ಮೂರು ದಿನದೊಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಹೆದ್ದಾರಿ ಬಂದ್ ಮಾಡಿ ಉಗ್ರ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೋಹನ್ ಗೋಳಿತ್ತಡಿ ವಿದ್ಯುತ್ ಸಮಸ್ಯೆಯ ಬಗ್ಗೆ ಮಾತನಾಡಿ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಬಿಜೆಪಿ ಮುಖಂಡರಾದ ಧರ್ಮಪಾಲ ರಾವ್ ಕಜೆ, ತಾಲೂಕು ಪಂ. ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ರಾಮಕುಂಜ ಗ್ರಾಮ ಪಂ. ಅಧ್ಯಕ್ಷ ಪ್ರಶಾಂತ್ ಆರ್.ಕೆ. ಮಾತನಾಡಿದರು.
ಪ್ರತಿಭಟನೆಯಲ್ಲಿ ತಾಲೂಕು ಪಂ. ಸದಸ್ಯೆ ಜಯಂತಿ ಅರ್.ಗೌಡ, ಕೊಯಿಲ ಗ್ರಾ.ಪಂ ಅಧ್ಯಕ್ಷೆ ಹೇಮಾ, ಉಪಾಧ್ಯಕ್ಷೆ ವಿಜಯ ಅಂಬಾ ಹಾಗೂ ಕೊಯಿಲ, ರಾಮಕುಂಜ, ಹಳೆನೇರಂಕಿ ಭಾಗದ ಸಾರ್ವಜನಿಕರು ಭಾಗವಹಿಸಿದ್ದರು.
ಎಡಬ್ಲ್ಯೂಡಿ ರಾಮಚಂದ್ರ ಮನವಿ ಸ್ವೀಕರಿಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ಸ್ಥಳದಲ್ಲಿ ಮೇಣದ ಬತ್ತಿಯನ್ನು ಉರಿಸಿ ಓದುವ ಮೂಲಕ ವಿದ್ಯುತ್ ಸಮಸ್ಯೆಯ ಗಂಭೀರತೆಯನ್ನು ಪ್ರದರ್ಶಿಸಿದರು.