ಎಸ್‌ಸಿಡಿಸಿಸಿ ಬ್ಯಾಂಕಿನ ನೂತನ 3 ಶಾಖೆ ಉದ್ಘಾಟನೆ: ಡಾ.ರಾಜೇಂದ್ರ ಕುಮಾರ್

Update: 2018-03-15 12:36 GMT

ಮಂಗಳೂರು, ಮಾ.15: ಎಸ್‌ಸಿಡಿಸಿಸಿ ಬ್ಯಾಂಕಿನ ಮೂರು ನೂತನ ಶಾಖೆಗಳನ್ನು ಪುತ್ತೂರಿನ ದರ್ಬೆ, ಮಂಗಳೂರು ತಾಲೂಕಿನ ದಾಮಸ್ ಕಟ್ಟೆ ಹಾಗೂ ಉಡುಪಿ ತಾಲೂಕಿನ ಮದ್ದೂರಿನಲ್ಲಿ ಕ್ರಮವಾಗಿ ಮಾ.20, 22 ಹಾಗೂ 26ರಂದು ಆರಂಭಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ 104 ವರ್ಷಗಳ ಇತಿಹಾಸ ಹಾಗೂ ಉನ್ನತ ಸಾಧನೆಯನ್ನು ಮಾಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ 105ನೆ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಮೂರು ಶಾಖೆಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಮಾ.20ರಂದು ದರ್ಬೆ ಶಾಖೆ ಉದ್ಘಾಟನೆ:

ಪುತ್ತೂರು ತಾಲೂಕಿನ ದರ್ಬೆಯ ಶ್ರೀರಾಮ ಸೌಧದಲ್ಲಿ ಆರಂಭಿಸಲಾಗುವ ಬ್ಯಾಂಕಿನ ನೂತನ ಶಾಖೆಯನ್ನು ಮಾ.20ರಂದು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸುವರು. ಗಣಕೀಕರಣವನ್ನು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಭದ್ರತಾ ಕೋಶವನ್ನು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸುವರು. ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಸಮಾರಂಭದಲ್ಲಿ ಪುತ್ತೂರು ತಾಪಂ ಅಧ್ಯಕ್ಷರಾದ ಭವಾನಿ ಸದಾನಂದ, ಪುತ್ತೂರು ನಗರ ಸಭಾಧ್ಯಕ್ಷೆ ಜಯಂತಿ ಬಲ್ನಾಡು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುರಳೀಧರ ರೈ, ಶೀರಾಮ ಸೌಧ ಕಟ್ಟಡದ ಮಾಲಕ ಉಮೇಶ್ ನಾಯಕ್ ಅತಿಥಿಗಳಾಗಿ ಭಾಗವಹಿಸುವರು.

ಮಾ.22ಕ್ಕೆ ಮದ್ದೂರು ಶಾಖೆ ಉದ್ಘಾಟನೆ:     
ಉಡುಪಿ ತಾಲೂಕಿನ ಮದೂರಿನ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ಆರಂಭಿಸುವ ಬ್ಯಾಂಕಿನ ನೂತನ ಶಾಖೆಯನ್ನು ಮಾ.22ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಗಣಕೀಕರಣವನ್ನು ಉಡುಪಿ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಂಘ.ನಿ. ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಭದ್ರತಾ ಕೋಶವನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್.ಧನಂಜಯ ಶೆಟ್ಟಿ ಉದ್ಘಾಟಿಸುವರು. ಸಮಾರಂಭದಲ್ಲಿ ಜಿಪಂ ಸದಸ್ಯರಾದ ಪ್ರತಾಪ್ ಹೆಗ್ಡೆ ಮರಾಳಿ, ಉಡುಪಿ ತಾಪಂ ಸದಸ್ಯೆ ಸುಶೀಲಾ ನಾಯ್ಕೆ, ನಾಲ್ಕೂರು ಗ್ರಾಪಂ ಅಧ್ಯಕ್ಷೆ ಲೀಲಾವತಿ ಪೂಜಾರಿ ಹಾಗೂ ಹೆಗ್ಡೆ ಕಾಂಪ್ಲೆಕ್ಸ್ ಕಟ್ಟಡ ಮಾಲಕರಾದ ಪ್ರಸಾದ್ ಹೆಗ್ಡೆ ಅತಿಥಿಗಳಾಗಿರುವರು.

ಮಾ.26ಕ್ಕೆ ದಾಮಸ್ ಕಟ್ಟೆ ಶಾಖೆ: ಮಂಗಳೂರು ತಾಲೂಕಿನ ಐಕಳ ಗ್ರಾಮದಲ್ಲಿರುವ ದಾಮಸ್ ಕಟ್ಟೆಯ ಅನ್ನಪೂರ್ಣೇಶ್ವರಿ ಕಟ್ಟಡದಲ್ಲಿ ಆರಂಭಿಸುವ ನೂತನ ಶಾಖೆಯನ್ನು ಮಾ.26ರಂದು ಶಾಸಕ ಕೆ.ಅಭಯ ಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಗಣಕೀಕರಣವನ್ನು ಸಂಸದ ನಳಿನ್ ಕುಮಾರ್ ಕಟೀಲು, ಭದ್ರತಾ ಕೋಶವನ್ನು ದಾಮಸ್‌ಕಟ್ಟೆಯ ರೆಮಿದಿ ಅಮ್ಮನವರ ಇಗರ್ಜಿಯ ಧರ್ಮಗುರು ವಂ.ವಿಕ್ಟರ್ ಡಿ ಮೆಲ್ಲ್ಲೊ ಉದ್ಘಾಟಿಸಲಿರುವರು. ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಐಕಳ ಗ್ರಾಪಂ ಅಧ್ಯಕ್ಷ ದಿವಾಕರ ಚೌಟ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲವ ಶೆಟ್ಟಿ, ಅನ್ನಪೂಣೇಶ್ವರಿ ಕಟ್ಟಡದ ಮಾಲಕಿ ಶ್ರದ್ಧಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.

ಠೇವಣಿ ಸಂಗ್ರಹಾ ಅಭಿಯಾನವನ್ನು ಈ ಮೂರು ಶಾಖೆಗಳಲ್ಲಿ ಆರಂಭಿಸಲಾಗಿದೆ. ಹೊಸ ಸಂಚಯ ಖಾತೆ ಯಲ್ಲಿ ಕನಿಷ್ಠ 2 ಸಾವಿರಕ್ಕಿಂತ ಮೇಲ್ಪಟ್ಟು ಮೊತ್ತವಿರುವ ಠೇವಣಿದಾರರಿಗೆ ಒಂದು ವರ್ಷ ಅವಧಿಯ ಠೇವಣಿಗಳಲ್ಲಿ ರೂ.25 ಸಾವಿರಕ್ಕಿಂತ ಮೇಲ್ಪಟ್ಟ ಮೊತ್ತವಿರುವ ಠೇವಣಿದಾರರಿಗೆ ಅದೃಷ್ಟ ಬಹುಮಾನ ಯೋಜನೆಯಡಿ ಪ್ರಥಮ ಬಹುಮಾನ 4 ಗ್ರಾಂ, ದ್ವಿತೀಯ 2 ಗ್ರಾಂ ಚಿನ್ನದ ನಾಣ್ಯ ನೀಡಲಾಗುವುದು ಎಂದು ರಾಜೇಂದ್ರಕುಮಾರ್ ವಿವರಿಸಿದರು.

ನೂತನ ಬ್ಯಾಂಕ್ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಮತ್ತು ಆರ್‌ಟಿಜಿಎಸ್ ,ನೆಪ್ಟ್ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ತ್ವರಿತ ಸೇವೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ನಿರಂಜನ್, ರಘುರಾಮ ಶೆಟ್ಟಿ, ವಾದಿರಾಜ ಶೆಟ್ಟಿ, ಭಾಸ್ಕರ ಕೋಟ್ಯಾನ್, ದೇವರಾಜ್ ಕೆ.ಎಸ್., ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಶಶಿ ಕುಮಾರ್ ರೈ, ಜಯರಾಮ ರೈ, ದೇವಿಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ, ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಎಸ್. ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News