ಯಡಿಯೂರಪ್ಪ ‘ಬ್ರೇಕಿಂಗ್ ನ್ಯೂಸ್’ ಬೆದರಿಕೆ ಹಾಕಿದ್ದು ಯಾರಿಗೆ?
ಬೆಂಗಳೂರು, ಮಾ.16: ಶುಕ್ರವಾರ 5 ಗಂಟೆಗೆ ತಾನೊಂದು ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದ ವಿಚಾರ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿದ್ದ ಯಡಿಯೂರಪ್ಪ ನಾಳೆ 5 ಗಂಟೆಗೆ ಸರಿಯಾಗಿ ಬ್ರೇಕಿಂಗ್ ನ್ಯೂಸ್ ಹೇಳುವುದಾಗಿ ತಿಳಿಸಿದ್ದರು. ಅದೇ ಪ್ರಕಾರ ಇಂದು ಯಡಿಯೂರಪ್ಪ ವಿಡಿಯೋ ಒಂದನ್ನು ಫೇಸ್ ಬುಕ್ ಹಾಗು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಬಿಜೆಪಿಯ ‘ಬ್ರೇಕಿಂಗ್ ನ್ಯೂಸ್’ ಸ್ಕ್ರಿಪ್ಟ್ ನ ಬ್ರೇಕ್ ಫೇಲ್ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಏಕೆಂದರೆ ಯಡಿಯೂರಪ್ಪ ಅವರು ಹೇಳಿದ್ದ 'ಬ್ರೇಕಿಂಗ್ ನ್ಯೂಸ್' ಅನ್ನು ಕಾದು ಕುಳಿತಿದ್ದವರಿಗೆ ನಿರಾಶೆ ಕಾದಿತ್ತು. ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾರ್ಯಕ್ರಮಗಳಲ್ಲಿ, ಸುದ್ದಿಗೋಷ್ಠಿಗಳಲ್ಲಿ ವಿವಿಧೆಡೆಗಳಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಹೊರಿಸಿದ್ದ ಆರೋಪಗಳನ್ನೇ ಯಡಿಯೂರಪ್ಪ ವಿಡಿಯೋದಲ್ಲಿ ಹೇಳಿದ್ದಾರೆ.
"ರಾಜ್ಯದ ಪ್ರತಿಯೊಬ್ಬರ ಮೇಲೆ ಸಾಲದ ಹೊರೆಯಿದೆ, ರಾಜ್ಯ ಸರಕಾರ ಪೊಳ್ಳು ಭರವಸೆಗಳನ್ನು ನೀಡುತ್ತಿದೆ, ಕೃಷಿ, ಸೇವಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ"..... ಹೀಗೆ ವಿಡಿಯೋದಲ್ಲಿ ಹಲವು ಆರೋಪಗಳನ್ನು ಹೊರಿಸಲಾಗಿದೆ. ಆದರೆ ಇದೇನೂ 'ಬ್ರೇಕಿಂಗ್ ನ್ಯೂಸ್' ಅಲ್ಲ, ಬಿಜೆಪಿ ನಾಯಕರು ಪ್ರತಿದಿನ ಮಾಡುತ್ತಿರುವ ಆರೋಪವಾಗಿದೆ ಎಂದು ಟ್ವಿಟರ್, ಫೇಸ್ ಬುಕ್ ನಲ್ಲಿ ಜನರು ಅಭಿಪ್ರಾಯಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ ಯಡಿಯೂರಪ್ಪರ 'ಬ್ರೇಕಿಂಗ್ ನ್ಯೂಸ್' ಬೆದರಿಕೆ ಯಾರ ವಿರುದ್ಧ ಎನ್ನುವ ಬಗ್ಗೆಯೂ ಹೊಸ ಚರ್ಚೆಯೊಂದು ಆರಂಭಗೊಂಡಿದೆ. ಪಕ್ಷದೊಳಗಿನ ಅಸಮಾಧಾನದ ವಿರುದ್ಧವೇ ಬ್ರೇಕಿಂಗ್ ನ್ಯೂಸ್ ಹಾಕಲು, ಹೈಕಮಾಂಡ್ ಗೆ ಬಿಸಿ ಮುಟ್ಟಿಸಲು ಯಡಿಯೂರಪ್ಪ ಈ ತಂತ್ರ ಅನುಸರಿಸಿದ್ದರೇ, ಕೊನೆಯ ಕ್ಷಣದಲ್ಲಿ ಅವರು ಮನಸು ಬದಲಾಯಿಸಿದರೇ ಎನ್ನುವ ಚರ್ಚೆಯೂ ಆರಂಭಗೊಂಡಿದೆ.
'ಬ್ರೇಕಿಂಗ್ ನ್ಯೂಸ್' ಎಂದಿದ್ದ ಯಡಿಯೂರಪ್ಪ ಇಂದು ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪಗಳು ಹೊಸದೇನಲ್ಲ ಹಾಗು ಈ ಆರೋಪಗಳಿಂದ ರಾಜ್ಯ ಸರಕಾರಕ್ಕೆ ಯಾವ ಸಮಸ್ಯೆಯೂ ಇಲ್ಲ, ಬಿಜೆಪಿಗೆ ಯಾವ ಲಾಭವೂ ಇಲ್ಲ. ಯಡಿಯೂರಪ್ಪ ಇಚ್ಛಿಸಿದ್ದ 'ಬ್ರೇಕಿಂಗ್ ನ್ಯೂಸ್' ಬೇರೆಯದ್ದೇ ಆಗಿರಬಹುದು. ಅದು ಪಕ್ಷದ ವಿರುದ್ಧವೇ ಆಗಿದ್ದಿರಬಹುದು. ಕೊನೆಯ ಕ್ಷಣದಲ್ಲಿ ತರಾತುರಿಯಲ್ಲಿ ಎಡಿಟ್ ಮಾಡಿದ ವಿಡಿಯೋವನ್ನು ‘ಬ್ರೇಕಿಂಗ್ ನ್ಯೂಸ್’ ಆಗಿ ಪೋಸ್ಟ್ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ,
ಯಡಿಯೂರಪ್ಪರ ‘ಬ್ರೇಕಿಂಗ್ ನ್ಯೂಸ್’ ಠುಸ್ಸಾಗಿದೆ ಎಂದು ಟ್ವಿಟರ್ ನಲ್ಲೇ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನೀವೇ ದೊಡ್ಡ ಬಕ್ರಾ. ಹಳೆಯ ವಿಡಿಯೋ ಹಾಕಿ ಬ್ರೇಕಿಂಗ್ ನ್ಯೂಸ್ ಎನ್ನುತ್ತೀರಿ”, “ನಿಮಗೆ ಕೆಲಸ ಮಾಡಲು ಒಳ್ಳೆಯ ಕೆಲಸಗಾರರನ್ನು ನೇಮಿಸಿ. ನಿಮ್ಮ ಖಾತೆಯನ್ನು ಅನಂತ್ ಕುಮಾರ್ ನಿರ್ವಹಿಸುತ್ತಿದ್ದಾರೆಯೇ” ಎಂದು ಶ್ರೀವತ್ಸ ಎಂಬವರು ಪ್ರಶ್ನಿಸಿದ್ದಾರೆ.
“4 ನಿಮಿಷಗಳು ವ್ಯರ್ಥವಾಯಿತು”, “ನನ್ನ 4 ನಿಮಿಷಗಳನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು”, “ಮತ್ತೊಮ್ಮೆ ಹಾವು ಇಲ್ಲದ ಬುಟ್ಟಿಯನ್ನು ಇಡಿದು ಪುಕ್ಕಟೆ ಪುಂಗಿ ಊದಿದ ರಾಜ್ಯದ ಏಕೈಕ ಕಾಮಿಡಿ ಪೀಸ್ ಯಡಿಯೂರಪ್ಪ” ಎಂದು ಹಲವರು ಟ್ವೀಟ್ ಮಾಡಿದ್ದಾರೆ.