ಮತದಾನ ಜಾಗೃತಿಗಾಗಿ ಕಾಲ್ನಡಿಗೆ ಜಾಥ
ಉಡುಪಿ, ಮಾ.16: ಚುನಾವಣೆ ಸಮೀಪಿಸುತ್ತಿರುವುದರಿಂದ ಮತದಾರರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ತಾರಾನಾಥ್ ಮೇಸ್ತ ಶಿರೂರು ಹಾಗೂ ವಿನಯಚಂದ್ರ ಸಾಸ್ತಾನ 'ಪ್ರತಿಜ್ಞೆಯ ನಡಿಗೆ...ಮತದಾರರ ಕಡೆಗೆ' ಎಂಬ ಘೋಷವಾಕ್ಯದೊಂದಿಗೆ ಕಾಲ್ನಡಿಗೆ ಜಾಥ ವನ್ನು ಬುಧವಾರ ನಡೆಸಿದರು.
ಅಭಿಯಾನಕ್ಕೆ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ವಿಶು ಶೆಟ್ಟಿ ಅಂಬಲಪಾಡಿ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ ಉಡುಪಿಯಿಂದ ಆರಂಭಗೊಂಡ ಅಭಿಯಾನವು ಸಂಜೆ 40ಕಿ.ಮೀ. ದೂರದ ಕುಂದಾಪುರದಲ್ಲಿ ಸಮಾಪನಗೊಂಡಿತು.
'ಮತದಾನ ನಮ್ಮ ಅಮೂಲ್ಯ ಹಕ್ಕು' ಯಾವುದೇ ಆಮಿಷಗಳಿಗೆ ಬಲಿಯಾಗದೆ, ಸ್ವಾಭಿಮಾನವನ್ನು ಕಳೆದುಕೊಳ್ಳದೆ ತಪ್ಪದೆ ಮತದಾನ ಮಾಡಿ, ತಮ್ಮ ಹಕ್ಕು ಚಲಾಯಿಸಿ ಎಂಬ ಕರಪತ್ರಗಳನ್ನು ನಡಿಗೆಯ ಹಾದಿಯುದ್ದಕ್ಕೂ ಮತದಾರರಿಗೆ ವಿತರಿಸಲಾಯಿತು. 'ಇದು ಮೊದಲ ಹಂತದ ಅಭಿಯಾನವಾಗಿದ್ದು, ಎರಡನೆ ಹಂತ ಉಡುಪಿಯಿಂದ ಕಾಪು, ಮೂರನೇ ಹಂತ ಉಡುಪಿಯಿಂದ ಕಾರ್ಕಳ, ಕೊನೆಯದಾಗಿ ಕುಂದಾಪುರದಿಂದ ಬೈಂದೂರುವರೆಗೆ ಅಭಿಯಾನ ನಡೆಸಲಾಗುವುದು. ಒಟ್ಟು 120ಕಿ.ಮೀ ದೂರದ ಅಭಿಯಾನ ಇದಾಗಿದೆ ಎಂದು ಅಭಿಯಾನದ ಕಾರ್ಯಕರ್ತರಾದ ತಾರನಾಥ ಮೇ್ತ ಹಾಗೂ ವಿನಯಚಂದ್ರ ತಿಳಿಸಿದ್ದಾರೆ.